ನವದೆಹಲಿ: ಗೀತರಚನೆಕಾರ ಹಾಗೂ ಚಿತ್ರಕಥೆಗಾರ ಜಾವೇದ್ ಅಖ್ತರ್ (Javed Akhtar) ಅವರ ಹೇಳಿಕೆಯೊಂದು ಇದೀಗ ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್ಲೂ ರಾಮ ಇದ್ದಾನೆ. ರಾಮ ಕೇವಲ ವ್ಯಕ್ತಿಯಲ್ಲ, ಅದೊಂದು ಜೀವನ ವಿಧಾನ ಹಾಗೂ ನೈತಿಕತೆಯ ಸಂಕೇತ ಎಂದು ಅವರು ನೀಡಿದ ಹೇಳಿಕೆಗೆ ಅಖಿಲ ಭಾರತ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಿಮ್ಮ ಹೆಸರನ್ನು ಜಾವೇದ್ ಅಖ್ತರ್ ಬದಲಿಗೆ ‘ರಾಮ್ ಪಾಲ್’ ಎಂದು ಬದಲಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.
‘ರಾಮಾಯಣ’ ಸಿನಿಮಾ ಹಾಗೂ ಶಾರುಖ್ ಖಾನ್ ಅಭಿನಯದ ‘ಸ್ವದೇಶ್’ ಚಿತ್ರಕ್ಕಾಗಿ ತಾವು ಬರೆದ ಹಾಡಿನ ಕುರಿತು ಮಾತನಾಡುವ ಸಂದರ್ಭದಲ್ಲಿ ಜಾವೇದ್ ಅಖ್ತರ್ ಈ ಹೇಳಿಕೆ ನೀಡಿದ್ದರು. ‘ಮನ್ ಸೇ ರಾವಣ್ ಜೋ ನಿಕಾಲೇ, ರಾಮ್ ಉಸ್ಕೇ ಮನ್ ಮೇ ಹೈ’ ಎಂಬ ಹಾಡಿನ ಸಾಲುಗಳನ್ನು ಉಲ್ಲೇಖಿಸಿದ ಅವರು, ರಾಮನ ಪರಿಕಲ್ಪನೆ ಧಾರ್ಮಿಕ ಗುರುತನ್ನು ಮೀರಿದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.
ರಾಮ ಕೇವಲ ಒಬ್ಬ ವ್ಯಕ್ತಿಯಲ್ಲ. ಆತ ನೈತಿಕತೆ, ಜೀವನ ವಿಧಾನ, ಸೌಂದರ್ಯಪ್ರಜ್ಞೆ ಮತ್ತು ಮೌಲ್ಯಗಳ ಸಂಕೇತ. ಯಾವುದೇ ಧರ್ಮವನ್ನು ಅನುಸರಿಸಿದರೂ ಪ್ರತಿಯೊಬ್ಬ ಭಾರತೀಯನ ರಕ್ತದಲ್ಲೂ ರಾಮ ಇದ್ದಾನೆ ಎಂದು ಜಾವೇದ್ ಅಖ್ತರ್ ಹೇಳಿದ್ದರು.
ಆದರೆ, ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮೌಲಾನಾ ಸಾಜಿದ್ ರಶೀದಿ, ಜಾವೇದ್ ಅಖ್ತರ್ ಅವರ ಹೇಳಿಕೆಯ ಹಿಂದೆ ವಾಣಿಜ್ಯ ಉದ್ದೇಶವಿದೆ ಎಂದು ಆರೋಪಿಸಿದ್ದಾರೆ. ಸಾರ್ವಜನಿಕವಾಗಿ ತಮ್ಮನ್ನು ನಾಸ್ತಿಕ ಎಂದು ಗುರುತಿಸಿಕೊಳ್ಳುವ ಜಾವೇದ್ ಅಖ್ತರ್ ಇದೀಗ ರಾಮನ ಬಗ್ಗೆ ಇಷ್ಟೊಂದು ಗೌರವದಿಂದ ಮಾತನಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಜಾವೇದ್ ಅಖ್ತರ್ ಒಬ್ಬ ಉದ್ಯಮಿ. ಬಾಲಿವುಡ್ನಲ್ಲಿ ಹಾಡುಗಳನ್ನು ಮಾರಾಟ ಮಾಡಲಾಗುತ್ತದೆ. ಅವರು ಇಂತಹ ಹೇಳಿಕೆಗಳನ್ನು ನೀಡದಿದ್ದರೆ ಅವರ ಹಾಡುಗಳನ್ನು ಯಾರು ಖರೀದಿಸುತ್ತಾರೆ? ಎಂದು ರಶೀದಿ ಪ್ರಶ್ನಿಸಿದ್ದಾರೆ.
ಹಲವು ಸಾರ್ವಜನಿಕ ವೇದಿಕೆಗಳಲ್ಲಿ ಜಾವೇದ್ ಅಖ್ತರ್ ತಾವು ನಾಸ್ತಿಕರು ಮತ್ತು ಯಾವುದೇ ಧರ್ಮದಲ್ಲಿ ನಂಬಿಕೆ ಹೊಂದಿಲ್ಲ ಎಂದು ಹೇಳಿಕೊಂಡಿದ್ದಾರೆ. ಹೀಗಿರುವಾಗ ರಾಮನ ಬಗ್ಗೆ ಇಷ್ಟೊಂದು ಗೌರವ ವ್ಯಕ್ತಪಡಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ ರಶೀದಿ, ‘ನನ್ನದೊಂದು ಸಲಹೆ, ಜಾವೇದ್ ಅಖ್ತರ್ ಎಂಬ ನಿಮ್ಮ ಹೆಸರನ್ನು ರಾಮ್ ಪಾಲ್ ಎಂದು ಬದಲಿಸಿಕೊಳ್ಳಿ. ಆಗ ದೇಶದ ಶೇ.80ರಷ್ಟು ಹಿಂದೂ ಜನಸಂಖ್ಯೆಯಿಂದ ನಿಮಗೆ ಸಂಪೂರ್ಣ ಗೌರವ ಮತ್ತು ಮನ್ನಣೆ ಸಿಗಬಹುದು’ ಎಂದು ವ್ಯಂಗ್ಯವಾಡಿದ್ದಾರೆ.















