₹75 ಲಕ್ಷ ವೆಚ್ಚದ ಸಂಗೀತ ಕಾರಂಜಿ ಎರಡು ವರ್ಷಗಳಿಂದ ಸ್ತಬ್ಧ!ಕೋಟ

ಉಡುಪಿ: ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ₹75 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕೋಟ ಕಾರಂತ ಕಲಾಭವನದ ಆವರಣದಲ್ಲಿನ ಸಂಗೀತ ಕಾರಂಜಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದೆ.

ಉದ್ಘಾಟನೆಯ ಸಂದರ್ಭದಲ್ಲಿ ಪ್ರವಾಸೋದ್ಯಮದ ಆಕರ್ಷಣೆಯಾಗಿ ಗುರುತಿಸಿಕೊಳ್ಳುವ ನಿರೀಕ್ಷೆ ಮೂಡಿಸಿದ್ದ ಯೋಜನೆ ಇದೀಗ ನಿರ್ವಹಣೆಯ ಕೊರತೆಯಿಂದ ಸ್ತಬ್ಧವಾಗಿದ್ದು, ಸಾರ್ವಜನಿಕರ ತೆರಿಗೆ ಹಣದ ಸದ್ಬಳಕೆಯ ಕುರಿತು ಪ್ರಶ್ನೆಗಳು ಎದ್ದಿವೆ.

ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟ ಕಾರಂತ ಕಲಾಭವನದ ಥೀಮ್ ಪಾರ್ಕ್‌ನ ಕೊಳದ ಮಧ್ಯಭಾಗದಲ್ಲಿ, ಹಿರಿಯ ಸಾಹಿತಿ ಶಿವರಾಮ ಕಾರಂತರ ಕಂಚಿನ ಪ್ರತಿಮೆಯ ಸುತ್ತ ಸಂಗೀತದ ಲಯಕ್ಕೆ ತಕ್ಕಂತೆ ನರ್ತಿಸುವ ರೀತಿಯಲ್ಲಿ ಈ ಕಾರಂಜಿಯನ್ನು ನಿರ್ಮಿಸಲಾಗಿತ್ತು. 2022ರ ಮಾರ್ಚ್ 1ರಂದು ಲೋಕಾರ್ಪಣೆಗೊಂಡಿದ್ದ ಈ ಯೋಜನೆ, ಅಂದಿನ ಸಮಾಜ ಕಲ್ಯಾಣ ಸಚಿವರಾಗಿದ್ದ ಹಾಗೂ ಕೋಟ ಕಾರಂತ ಪ್ರತಿಷ್ಠಾನದ ಆಡಳಿತ ನಿರ್ದೇಶಕರೂ ಆಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರ ಕನಸಿನ ಯೋಜನೆಯಾಗಿತ್ತು.ಕಾರಂಜಿಯು ಪ್ರತಿ ತಿಂಗಳ ಮೊದಲ ಶುಕ್ರವಾರ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳಂದು ಸಂಗೀತ ಮತ್ತು ವಿದ್ಯುತ್ ದೀಪಾಲಂಕಾರದ ವಿಶೇಷ ಪ್ರದರ್ಶನ ನೀಡಲಿದೆ ಎಂದು ನಿರೀಕ್ಷಿಸಲಾಗಿತ್ತು.

ಸ್ಥಳೀಯರು ಹಾಗೂ ಪ್ರವಾಸಿಗರ ಕೋರಿಕೆಯ ಮೇರೆಗೆ ಪ್ರದರ್ಶನ ಆಯೋಜಿಸುವ ಭರವಸೆಯೂ ನೀಡಲಾಗಿತ್ತು. ಇದರಿಂದ ಕಾರಂತ ಕಲಾಭವನದ ಥೀಮ್ ಪಾರ್ಕ್ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಲಿದೆ ಎಂಬ ಆಶಯವಿತ್ತು.ಆದರೆ, ಇದೀಗ ಕಾರಂಜಿಯ ಪಂಪ್ ಹಾಗೂ ವಿದ್ಯುತ್ ಉಪಕರಣಗಳು ಹಾಳಾಗಿವೆ ಎನ್ನಲಾಗಿದ್ದು, ಸಂಗೀತದೊಂದಿಗೆ ನೀರಿನ ಚಿಮ್ಮುವಿಕೆಯನ್ನು ವೀಕ್ಷಿಸಲು ನಿರ್ಮಿಸಿದ್ದ ಗ್ಯಾಲರಿಯೂ ನಿರ್ವಹಣೆಯಿಲ್ಲದೆ ಅನಾಥ ಸ್ಥಿತಿಯಲ್ಲಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಯೋಜನೆಯೇ ಬಳಕೆಯಾಗದೆ ಉಳಿದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ನಿರ್ವಹಣೆಯ ಹೊಣೆ ಯಾರದ್ದು?ಕಾಮಗಾರಿ ಪೂರ್ಣಗೊಂಡ ಬಳಿಕ ನಿಗದಿತ ಅವಧಿಗೆ ಕಾಮಗಾರಿ ನಿರ್ವಹಿಸಿದ ಸಂಸ್ಥೆಯೇ ಕಾರಂಜಿಯ ನಿರ್ವಹಣೆ ಮಾಡಬೇಕಿತ್ತು ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಂಬಂಧಿಸಿದ ಸಂಸ್ಥೆಯ ಅಧಿಕಾರಿಯೊಬ್ಬರು, ಕಾಮಗಾರಿಯ ಷರತ್ತಿನಂತೆ ಒಂದು ವರ್ಷದವರೆಗೆ ನಿರ್ವಹಣೆಯ ಜವಾಬ್ದಾರಿ ಸಂಸ್ಥೆಯದ್ದಾಗಿತ್ತು. ಆ ಅವಧಿಯಲ್ಲಿ ನಿರ್ವಹಣೆ ಮಾಡಲಾಗಿದೆ. ಇದೀಗ ಸ್ಥಳೀಯಾಡಳಿತ ಹಾಗೂ ಥೀಮ್ ಪಾರ್ಕ್‌ನ ಉಸ್ತುವಾರಿ ವ್ಯವಸ್ಥೆಯವರು ಸಮಸ್ಯೆ ಸರಿಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಆದರೆ, ₹75 ಲಕ್ಷ ವೆಚ್ಚದ ಯೋಜನೆ ಅಲ್ಪಾವಧಿಯಲ್ಲೇ ಸ್ಥಗಿತಗೊಳ್ಳಲು ಕಾರಣವೇನು, ಕಾಮಗಾರಿ ಗುಣಮಟ್ಟದಿಂದ ನಡೆದಿತ್ತೇ, ಅನುದಾನ ಸಮರ್ಪಕವಾಗಿ ಬಳಕೆಯಾಗಿದೆಯೇ ಹಾಗೂ ನಿರ್ವಹಣೆಯಲ್ಲಿ ಲೋಪವಾಗಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ನಿರ್ಮಿಸಿದ ಯೋಜನೆ ನಿರುಪಯುಕ್ತವಾಗದಂತೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಕಾಮಗಾರಿ ಹಾಗೂ ಅನುದಾನದ ಬಳಕೆಯ ಕುರಿತು ಪರಿಶೀಲನೆ ನಡೆಸಿ, ತಾಂತ್ರಿಕ ದೋಷಗಳನ್ನು ಸರಿಪಡಿಸಿ ಸಂಗೀತ ಕಾರಂಜಿಯನ್ನು ಪುನರಾರಂಭಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಸಾರ್ವಜನಿಕರ ಹಣದಲ್ಲಿ ನಿರ್ಮಿಸಲಾದ ಯೋಜನೆ ನಿರ್ವಹಣೆಯ ಕೊರತೆಯಿಂದ ಹಾಳಾಗದಂತೆ ನೋಡಿಕೊಳ್ಳುವುದು ಸಂಬಂಧಿಸಿದ ಆಡಳಿತ ವ್ಯವಸ್ಥೆಯ ಜವಾಬ್ದಾರಿಯಾಗಿದೆ.

ಕೋಟ ಕಾರಂತ ಕಲಾಭವನದ ಆವರಣದಲ್ಲಿ ಮತ್ತೆ ಸಂಗೀತ ಕಾರಂಜಿಯ ಲಯ ಮೊಳಗುವುದೇ ಎಂಬುದನ್ನು ಕಾದು ನೋಡಬೇಕಿದೆ.