ಕೋರ್ಟ್ ಆವರಣದಲ್ಲೇ ವಕೀಲನ ಬರ್ಬರ ಹತ್ಯೆ

ವಿಜಯನಗರ (ಹೊಸಪೇಟೆ): ಕೋರ್ಟ್ ಆವರಣದಲ್ಲಿಯೇ ವಕೀಲನೊಬ್ಬರನ್ನು ಯುವಕ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಹೊಸಪೇಟೆ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದಿದೆ.

ಮೃತರನ್ನು ವಕೀಲ, ಕಾಂಗ್ರೆಸ್ ಮುಖಂಡ ತಾರಿಹಳ್ಳಿ ವೆಂಕಟೇಶ್ (48) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾರಿಹಳ್ಳಿ ಅವರ ಸಂಬಂಧಿ ಮನೋಜ್ (22)ಎಂಬಾತ ಮಚ್ಚಿನಿಂದ ಕುತ್ತಿಗೆಯ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ವೆಂಕಟೇಶ್ ಕುರ್ಚಿ ಮೇಲೆ  ಕುಳಿತುಕೊಂಡು ನೋಟರಿ ಮಾಡುತ್ತಿದ್ದರು. ಈ ವೇಳೆ ಏಕಾಏಕಿಯಾಗಿ ಬಂದ ಮನೋಜ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಮಚ್ಚಿನ ಹೊಡತಕ್ಕೆ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ನ್ಯಾಯಾಲಯದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗುಂಪುಗೂಡಿದ ಜನರನ್ನು ಪೊಲೀಸರು ಅಲ್ಲಿಂದ ಕಳುಹಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರು. ಕೊಲೆ ಮಾಡಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.