ಕಾಪು: ಕಳೆದ 21 ವರ್ಷಗಳ ಹಿಂದೆ ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆದ ಕರಂದಾಡಿ ಗುತ್ತು ಜಯರಾಮ ಶೆಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಇಲಿಯಾಸ್ ಯಾನೆ ಮಹಮ್ಮದ್ ಹಸನ್ (45) ಎಂಬಾತನನ್ನು ಬಂಧಿಸುವಲ್ಲಿ ಕಾಪು ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ವಿವರ: 2000ರ ಡಿಸೆಂಬರ್ 4ರಂದು ರಾತ್ರಿ ವೇಳೆ ಮಜೂರು ಗ್ರಾಮದ ಕರಂದಾಡಿ ಎಂಬಲ್ಲಿ ಆರೋಪಿ ಉದಯ ಶೆಟ್ಟಿ ಯಾನೆ ದಾಡೆ ಉದಯ ಎಂಬವನು ಸುನಿಲ್ ಶೆಟ್ಟಿ, ಇಲಿಯಾಸ್ ಯಾನೆ ಮಹಮ್ಮದ್ ಹಸನ್ ಮತ್ತು ಅಬೂಬಕ್ಕರ್ ಸಿದ್ದಿಕ್ ಎಂಬವರೊಂದಿಗೆ ಸೇರಿ ತನ್ನ ಅಣ್ಣ ಕರಂದಾಡಿ ಗುತ್ತು ಜಯರಾಮ ಶೆಟ್ಟಿ ಅವರನ್ನು ಅವರ ಮನೆಯಲ್ಲಿಯೇ ಕೊಲೆ ಮಾಡಿದ್ದರು. ಈ ಬಗ್ಗೆ ಅಂದಿನ ಶಿರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.
ಈ ನಡುವೆ ಆರೋಪಿ ಮಹಮ್ಮದ್ ಹಸನ್ 2007ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಅಲ್ಲದೆ, ಮಹಮ್ಮದ್ ರಫೀಕ್ ಎಂಬ ಹೆಸರಿನಲ್ಲಿ ನಕಲಿ ಪಾಸ್ ಪೋರ್ಟ್ ಸೃಷ್ಟಿಸಿ ಸೌದಿ ಅರೇಬಿಯಕ್ಕೆ ಪರಾರಿಯಾಗಿ ಅಲ್ಲಿ ತಲೆಮರೆಸಿಕೊಂಡಿದ್ದನು.
ಈತನ ವಿರುದ್ಧ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯವು ವಾರೆಂಟ್ ಹೊರಡಿಸಿತ್ತು. ಇದೀಗ ಆರೋಪಿಯ ಇರುವಿಕೆ ಬಗ್ಗೆ ಕಾಪು ಠಾಣಾ ವಾರಂಟು ಸಿಬ್ಬಂದಿ ಸುಧಾಕರ ಭಂಡಾರಿ, ರಫೀಕ್, ಸಂದೇಶ್ ಭಂಡಾರಿ ಅವರು ಮಾಹಿತಿ ಸಂಗ್ರಹಿಸಿ, ಇಂದು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.