ಬೆಳ್ತಂಗಡಿ: 2012ರಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬೂರ್ಜೆ ಎಂಬಲ್ಲಿ ನಡೆದಿದ್ದ ಆನೆ ಮಾವುತ ನಾರಾಯಣ ಮತ್ತು ಅವರ ಸಹೋದರಿ ಯಮುನಾ ಅವರ ಅಮಾನುಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಶಕದ ಬಳಿಕ ಮರು ತನಿಖೆಗೆ ಆಗ್ರಹಿಸಿ ಅವರ ಮಕ್ಕಳು ಬೆಳ್ತಂಗಡಿಯ ವಿಶೇಷ ತನಿಖಾ ದಳ (ಎಸ್ಐಟಿ) ಕಚೇರಿಗೆ ದೂರು ನೀಡಿದ್ದಾರೆ.
ಮೃತ ನಾರಾಯಣ ಅವರ ಪುತ್ರ ಗಣೇಶ್ ಮತ್ತು ಪುತ್ರಿ ಭಾರತಿ, ತಮ್ಮ ತಂದೆ ಮತ್ತು ಅತ್ತೆಯ ಸಾವಿನ ಹಿಂದಿನ ರಹಸ್ಯ ಬಯಲಾಗಬೇಕು, ನಿಜವಾದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಎಸ್ಐಟಿ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಏನಿದು ಪ್ರಕರಣ:
2012ರ ಸೆಪ್ಟೆಂಬರ್ 16ರಂದು ಧರ್ಮಸ್ಥಳದ ಬೂರ್ಜೆ ಎಂಬಲ್ಲಿ ಕಾಡಿನಲ್ಲಿ ವಾಸವಿದ್ದ ಆನೆ ಮಾವುತ ನಾರಾಯಣ ಮತ್ತು ಅವರ ಸಹೋದರಿ ಯಮುನಾ ಅವರನ್ನು ಯಾರೋ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದರು. ಈ ಘಟನೆ ಆಗಲೇ ಇಡೀ ಬೆಳ್ತಂಗಡಿ ತಾಲೂಕಿನಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ ಈ ಬಗ್ಗೆ ಸಮಾಜದಲ್ಲಿ ಹಲವು ಅನುಮಾನಗಳು ಉಳಿದುಕೊಂಡಿದ್ದವು.
ಪ್ರಕರಣ ನಡೆದ ಹಲವು ವರ್ಷಗಳ ಬಳಿಕವೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ, ಮರು ತನಿಖೆಗೆ ಆಗ್ರಹಿಸಿ ಗಣೇಶ್ ಮತ್ತು ಭಾರತಿ ಅವರು ಇದೀಗ ಎಸ್ಐಟಿ ಮೊರೆ ಹೋಗಿದ್ದಾರೆ. ತಮ್ಮ ಪೋಷಕರಿಗೆ ನ್ಯಾಯ ಸಿಗಬೇಕು, ಅವರ ಸಾವಿಗೆ ಕಾರಣರಾದ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಪ್ರಕರಣದ ಮರು ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಎಸ್ಐಟಿಗೆ ಮನವಿ ಮಾಡಲಾಗಿದ್ದು, ಅಧಿಕಾರಿಗಳ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ.












