ಹೆಬ್ರಿ : ಆಧುನಿಕ ಯುಗದಲ್ಲೂ ಕೃಷಿಯ ಮೂಲಕ ಜೀವನವನ್ನು ನಡೆಸಬಹುದು ಎನ್ನುವ ಸಂದೇಶವನ್ನು ಜಗತ್ತಿಗೆ ಸಾರಿ, ಕೃಷಿಗೆ ಸಾಂಸ್ಥಿಕ ಸ್ಪರ್ಶ ನೀಡಿ ಮುನಿಯಾಲಿನ ಮಣ್ಣನ್ನು ಗೋಧಾಮದ ಮೂಲಕ ಪಾವನಗೊಳಿಸುವ ಮಹಾತ್ಕಾರ್ಯವನ್ನು ವಿಭಿನ್ನ ಯೋಚನೆ ಯೋಜನೆಯ ಸಾಧಕ ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.
ಅವರು ಭಾನುವಾರ ಮುನಿಯಾಲಿನಲ್ಲಿರುವ ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸಂಜೀವಿನಿ ಫಾರ್ಮ್ ಮತ್ತು ಡೈರಿ ಗೋಧಾಮದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಾರತೀಯ ಗೋತಳಿಗಳ ಸಂರಕ್ಷಣೆಯನ್ನು ಮಾಡುವ ಮೂಲಕ ಮುನಿಯಾಲು ಗೋಧಾಮ ದೇಶಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ ಎಂದು ಹಾಸನ ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಶ್ರೀಶಿವಸುಜ್ಞಾನ ಮೂರ್ತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಧರ್ಮವನ್ನು ಉಳಿಸುವ ಪುಣ್ಯದ ಕಾರ್ಯದ ಮೂಲಕ ಮುನಿಯಾಲಿನ ಗೋಧಾಮಕ್ಕೆ ಆಧುನಿಕ ಟಚ್ ನೀಡಿ ವೈಕುಂಠದಂತೆ ಗೋಲೋಕವನ್ನೇ ಡಾ.ಜಿ.ರಾಮಕೃಷ್ಣ ಆಚಾರ್ ಮಾಡಿದ್ದಾರೆ ಎಂದು ಕಟಪಾಡಿ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಭಾರತೀಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಮುನಿಯಾಲಿನ ಸಂಜೀವಿನಿ ಫಾರ್ಮ್ ಮತ್ತು ಡೈರಿ ಗೋಧಾಮದ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್ ಮಾತನಾಡಿ, ಯುವ ಪೀಳಿಗೆಯನ್ನು ನಗರ ಜೀವನದಿಂದ ಕೃಷಿ ಜೀವನದತ್ತ ಆಕರ್ಷಿಸಿ ಪುರಾತನ ಗೋತಳಿಗಳ ಸಂರಕ್ಷಣೆಯ ಜೊತೆಗೆ ಗೋಧಾಮವನ್ನು ಕೃಷಿ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಸುವುದು ನಮ್ಮ ಉದ್ದೇಶ ಎಂದರು.
ಮೂಡಬಿದರೆ ಬಾಲಾಜಿ ಉದ್ಯಮ ಸಮೂಹದ ಅಧ್ಯಕ್ಷ ವಿಶ್ವನಾಥ ಪ್ರಭು, ಡೈರಿ ಗೋಧಾಮದ ಕಾರ್ಯದರ್ಶಿ ಸವಿತಾ ರಾಮಕೃಷ್ಣ ಆಚಾರ್, ವಿವಿಧ ಗಣ್ಯರು ಉಪಸ್ಥಿತರಿದ್ದರು.
ನಾಗಬನದಲ್ಲಿ ನಮೋ ನಾಗೇಂದ್ರ, ಕೃಷ್ಣಪೂಜೆ ಕೃಷ್ಣಂ ವಂದೇ ಜಗದ್ಗುರುಮ್, ಕುಣಿತ ಭಜನೆ ಸಂಕೀರ್ತನಮ್, ಪಾವನ ಚರಣ..ಗುರುಚರಣ, ನಾದ ಮಂದಾಕಿನಿ, ನಾಗಲೋಕ ನಾದಲೋಕ, ಪ್ರಣಮಾಮಿ ಮತ್ತು ಯಕ್ಷೋಪಾಸನಾ ಸಹಿತ ವಿಶೇಷ ಕಾರ್ಯಕ್ರಮ ನಡೆಯಿತು.
ಪುರೋಹಿತ್ ದಾಮೋದರ ಶರ್ಮ ನಿರೂಪಿಸಿ ಸ್ವಾಗತಿಸಿದರು.