ಮುನಿಯಾಲು ಸಂಜೀವಿನಿ ಫಾರ್ಮ್ಸ್ ಮತ್ತು ಡೈರಿ ಟ್ರಸ್ಟ್: ದೇಸಿ ಗೋವುಗಳ ಹಾಲಿನ ಉತ್ಪನ್ನ ಬಿಡುಗಡೆ

ಕಾರ್ಕಳ: ತಾಲೂಕಿನ ಮುನಿಯಾಲಿನ ಸಂಜೀವಿನಿ ಫಾರ್ಮ್ಸ್ ಮತ್ತು ಡೈರಿ ಟ್ರಸ್ಟ್ ನಲ್ಲಿ ದೇಸಿ ಗೋವುಗಳ ಹಾಲಿನ ಉತ್ಪನ್ನಗಳ ಬಿಡುಗಡೆ ಸಮಾರಂಭ ಭಾನುವಾರ ನಡೆಯಿತು.

ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಸಿ.ಇ.ಓ ಎಮ್.ಎಸ್. ಮಹಾಬಲೇಶ್ವರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇವರು ಗೋವಿನೊಳಗೆ ನೆಲೆಸಿದ್ದಾನೆ, ಹೀಗಾಗಿ ನಾನು ಅವುಗಳ ಮಧ್ಯೆಯೇ ವಾಸಿಸುತ್ತೇನೆ ಎಂದು ಶ್ರೀಕೃಷ್ಣ ಪರಮಾತ್ಮ ಗೀತಾ ಶ್ಲೋಕದ ಮೂಲಕ ತಿಳಿಸಿದ್ದಾನೆ. ಆಧುನಿಕತೆಗೆ ಒಡ್ಡಿಕೊಳ್ಳುತ್ತಿರುವ ಇಂದಿನ ಸಮಾಜದಲ್ಲಿ ರಾಮಕೃಷ್ಣ ಆಚಾರ್ ಮತ್ತು ಸವಿತಾ ಆಚಾರ್ ರವರು ನಡೆಸುತ್ತಿರುವ ಗೋಧಾಮ ವಿಶೇಷವಾಗಿದೆ. ಲೋಕಲ್ ಆಗಿ ಹುಟ್ಟಿದ ರಾಮಕೃಷ್ಣ ಆಚಾರ್ ಬೆಳೆದು ನಿಂತು ಗ್ಲೋಬಲ್ ಆಗಿದ್ದಾರೆ ಎಂದರು.

ಮಂಗಳೂರು ವಿವಿಯ ಉಪಕುಲಪತಿ ಯಡಪಡಿತ್ತಾಯ ಮಾತನಾಡಿ, ಹೆತ್ತ ತಾಯಿಯ ನಂತರದ ಸ್ಥಾನದಲ್ಲಿ ಗೋ ಮಾತೆಯನ್ನು ಕಾಣುತ್ತೇವೆ. ಇಂತಹ ಗೋ ಮಾತೆಯನ್ನು ಆರೈಕೆ ಮಾಡುತ್ತಾ ಅದರ ಜೊತೆಗೆ ಮುಂದಿನ ಪೀಳಿಗೆಗೆ ಗೋವೆಂಬ ಕಾಮಧೇನುವಿನ ಮಾಹಿತಿಯನ್ನು ತಿಳಿಸುತ್ತಿದ್ದಾರೆ. ಅಧ್ಯಯನ ದೃಷ್ಟಿಯಿಂದ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡುವುದು ಸಂತಸ ತಂದಿದೆ ಎಂದರು.

ಗೋಧಾಮದ ಮ್ಯಾನೇಜಿಂಗ್ ಟ್ರಸ್ಟಿ ಜಿ.ರಾಮಕೃಷ್ಣ ಆಚಾರ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಬೋಳ ಸುರೇಂದ್ರ ಕಾಮತ್ ಆ್ಯಂಡ್ ಸನ್ಸ್ ನ ವ್ಯವಸ್ಥಾಪಕ ಪಾಲುದಾರ ಬೋಳ ದಾಮೋದರ್ ಕಾಮತ್, ಕ್ಯಾಂಪ್ಕೊ ಲಿಮಿಟೆಡ್ ನ ಅಧ್ಯಕ್ಷ ಕಿಶೋರ್ ಕೊಡ್ಗಿ, ಮಂಗಳೂರಿನ ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ್ ಸುವರ್ಣ ಉಪಸ್ಥಿತರಿದ್ದರು.

ಗೋಧಾಮ ಟ್ರಸ್ಟಿ ಸವಿತಾ ಆಚಾರ್ ಸ್ವಾಗತಿಸಿದರು, ಧಾರ್ಮಿಕ ಕಾರ್ಯಕ್ರಮಗಳ ನಿರೂಪಕ ದಾಮೋದರ್ ಶರ್ಮ ನಿರೂಪಿಸಿದರು.