-ಉಡುಪಿ xpress ಫೋಕಸ್
ಇವರು ಪರಿಸರವನ್ನು ಕೊಳ್ಳೆ ಹೊಡೆಯುವ ಯಾವ ವ್ಯಕ್ತಿಯನ್ನೂ ಸುಮ್ಮನೆ ಬಿಡಲ್ಲ. ಅವರು ರಾಜಕಾರಣಿಯಾಗಿರಲಿ, ಸಾಮಾನ್ಯ ಮನುಷ್ಯನಾಗಿರಲಿ,ಯಾವ ಪಕ್ಷದವರೇ ಆಗಿರಲಿ ಅವರ ಜಾತಕ ಹೊರಗೆ ಹಾಕಿ ಅವರಿಗೆ ಮಾಡಬೇಕಾದ ಶಾಸ್ತಿ ಮಾಡುತ್ತಾರೆ. ಪರಿಸರ ಹಾಳು ಮಾಡುವ ಯಾವನಾದರೂ ಸರಿ ಅವನಿಗೆ ಶಿಕ್ಷೆ ನೀಡದೇ ಇರಬಾರದು ಎನ್ನುವ ನಿಲುವಿನ ಈ ದಕ್ಷ ಯುವ ಅಧಿಕಾರಿಯೇ ಮುನಿರಾಜು.
ಹೆಬ್ರಿ ತಾಲೂಕು ವಲಯ ಅರಣ್ಯಾಧಿಕಾರಿಯಾಗಿರುವ ಇವರು ಭಾನುವಾರವಷ್ಟೇ ಚಾರ ಗ್ರಾಮದ ಮತ್ತು ಬಿಜೆಪಿಯ ಬೇಳಂಜೆ ಜನಪ್ರತಿನಿಧಿ ಅಮೃತ್ ಕುಮಾರ್ ಶೆಟ್ಟಿ, ಯಾರದ್ದೋ ತೋಟದಲ್ಲಿ ಹುದುಗಿಸಿಟ್ಟಿರುವ ಅಕ್ರಮ ಮರಗಳನ್ನು ಶೋಧಿಸಿ, ಸಂಬಂಧಿಸಿದವರ ಮೇಲೆ ಕ್ರಮ ಕೈಗೊಂಡು ಇದೀಗ ಸುದ್ದಿಯಲ್ಲಿದ್ದಾರೆ. ಹೆಬ್ರಿ ತಾಲೂಕಿನಲ್ಲಿ ಆಗಾಗ ನಡೆಯುತ್ತಿರುವ ಅಕ್ರಮ ಮರ ಸಾಗಾಟದಲ್ಲಿ ರಾಜಕಾರಣಿಗಳ, ಉದ್ಯಮಿಗಳ ಕೈವಾಡವಿದೆ ಎನ್ನಲಾಗಿದ್ದು ಇದೀಗ ಪ್ರಾಮಾಣಿಕ ಅರಣ್ಯಾಧಿಕಾರಿಗೆ ಎತ್ತಂಗಡಿ ಮಾಡಿ ಪರಿಸರವಾದಿ ಅರಣ್ಯಾಧಿಕಾರಿಯವರ ಧ್ವನಿಯನ್ನು ಮುರಿಯುವ ಪ್ರಯತ್ನದಲ್ಲಿ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳು ತೊಡಗಿರುವುದು ಶೋಚನೀಯ ಸಂಗತಿ.
ಅಧಿಕಾರಿ ಎಂದರೆ ಹೀಗಿರಬೇಕು:
ನಿಜವಾಗಲೂ ಅರಣ್ಯಾಧಿಕಾರಿಗಳು ಮಾಡಬೇಕಾದ ಕೆಲಸವೇನೆಂದರೆ ಪರಿಸರವನ್ನು ಕೊಳ್ಳೆ ಹೊಡೆಯುವ ಯಾರೇ ಆಗಿರಲಿ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಆದರೆ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಮರ ಸಾಗಾಣಿಕೆ ಮತ್ತು ಪರಿಸರ ನಾಶದಲ್ಲಿ ತೊಡಗಿರುವ ವ್ಯಕ್ತಿಗಳು, ಮುಖ್ಯವಾಗಿ ಪ್ರಭಾವಿ ರಾಜಕಾರಣಿಗಳು ಅರಣ್ಯಾಧಿಕಾರಿಗಳಿಗೆ ಬೆದರಿಸಿ, ಪೋಸಿ ಹೊಡೆದು ತಮ್ಮ ಕಾರ್ಯ ಸಾಧಿಸುತ್ತಿದ್ದಾರೆ. ಅಂತಹ ವ್ಯಕ್ತಿಗಳನ್ನು ಬೆನ್ನಟ್ಟಿದ ಕೋಲಾರ ಮೂಲದ ಅಧಿಕಾರಿ ಮುನಿರಾಜು, ವೃತ್ತಿಯೇ ಪ್ರಾಮಾಣಿಕತೆ, ಪರಿಸರವೇ ನಮ್ಮ ಧರ್ಮ ಅಂತ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾರ್ಕಳ ತಾಲೂಕಿನ ಕಬ್ಬಿನಾಲೆಯಲ್ಲಿ ಅರಣ್ಯದಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ನಿರತರಾದ ವ್ಯಕ್ತಿಗಳನ್ನು, ನಾಡ್ಪಾಲು ಅಕ್ರಮ ಮಣ್ಣು ಸಾಗಾಟ ಜಾಲವನ್ನು, ಚೆರ್ಕಾಡಿ-ಪೆರ್ಡೂರು ಅಕ್ರಮ ಮರ ಸಾಗಾಣಿಕೆಯನ್ನುಜಾಲಾಡಿದ ಅಧಿಕಾರಿ ಮುನಿರಾಜು ಅವರ ಪ್ರಾಮಾಣಿಕ ಕೆಲಸ ಪ್ರಭಾವಿ ವ್ಯಕ್ತಿಗಳಿಗೆ ಉರುಳಾಗಿದೆ. ಆದರೆ ಜನರಿಂದ ಅರಣ್ಯಾಧಿಕಾರಿ ತಮ್ಮ ದಕ್ಷತೆಗೆ ಭೇಷ್ ಅನ್ನಿಸಿಕೊಂಡಿದ್ದಾರೆ.
ಪ್ರಾಮಾಣಿಕತೆಗೆ ಜಿಲ್ಲೆಯಲ್ಲಿ ಬೆಲೆ ಇಲ್ಲವೇ?
ದಿನೇ ದಿನೇ ಎಂಬಂತೆ ಜಿಲ್ಲೆಯಲ್ಲಿ ಅರಣ್ಯ ವ್ಯಾಪ್ತಿ ಕುಗ್ಗುತ್ತಿದೆ. ಹೊರಗೆ ಹಿಗ್ಗುತ್ತಿರುವಂತೆ ಕಂಡರೂ ಅರಣ್ಯಗಳ ಒಳಗೆ ಮರ ಸಾಗಿಸುವ ಕೆಲಸ ಹೇಗೋ ನಡೆಯುತ್ತಿದೆ.ಈ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಪ್ರಾಮಾಣಿಕ ಅಧಿಕಾರಿಗಳನ್ನೇ ಎತ್ತಂಗಡಿ ಮಾಡಿದರೆ ಅರಣ್ಯದ ಸ್ಥಿತಿ ಏನಾಗಬೇಕು? ರಾಜ್ಯದ ಅರಣ್ಯ ಉಳಿಯಬೇಕಾದರೆ ಇಂತಹ ಪ್ರಾಮಾಣಿಕ ಅಧಿಕಾರಿಗಳೇ ಬೇಕು. ನಮ್ಮ ವ್ಯವಸ್ಥೆ ಹೇಗಿದೆ ಎಂದರೆ, ಕೋಟಿ ಕೋಟಿ ದುಡ್ಡು ಮಾಡಿ ಕೆಲಸವೇ ಮಾಡದ ಅಧಿಕಾರಿಗಳು ಬೆಳೆಯುತ್ತಿದ್ದಾರೆ, ಆದರೆ ಪ್ರಾಮಾಣಿಕವಾಗಿ, ಕಾಳಜಿ ಇಟ್ಟುಕೊಂಡು ಅರಣ್ಯವನ್ನು ಉಳಿಸಲು ಏನಾದರೂ ಮಾಡಬೇಕು ಎಂದು ಕನಸು ಹೊತ್ತುಕೊಂಡು ಕೆಲಸಕ್ಕೆ ಸೇರುವ ಮುನಿರಾಜು ಅವರಂತಹ ಅಧಿಕಾರಿಗಳ ಪ್ರಾಮಾಣಿಕತೆಯನ್ನು ಗುರುತಿಸುವವರು ಯಾರೂ ಇಲ್ಲದಂತಾಗಿದೆ. ಇಂತಹ ಅಧಿಕಾರಿಗಳಿಗೆ ಇದೀಗ ಜನ ಬೆಂಬಲ ಬೇಕಿದೆ. ಪ್ರಾಮಾಣಿಕ ಅಧಿಕಾರಿಗೆ ಬೆಂಬಲ ನೀಡದಿದ್ದರೆ ಅರಣ್ಯ ಕೊಳ್ಳೆ ಹೊಡೆಯುವವರು ಜಾಸ್ತಿಯಾಗೋದು ಗ್ಯಾರಂಟಿ.