ಮುಂಬೈ: ಖ್ಯಾತ ನಿರೂಪಕ ಅರ್ನಾಬ್ ಗೋಸ್ವಾಮಿ ಸಂಪಾದಕತ್ವದ ರಿಪಬ್ಲಿಕ್ ಟಿವಿಯು ಟಿಆರ್ ಪಿ ಯಲ್ಲಿ ಭಾರೀ ಗೋಲ್ ಮಾಲ್ ಮಾಡಿರುವ ವಿಚಾರವನ್ನು ಮುಂಬೈ ಪೊಲೀಸರು ಬಯಲಿಗೆಳೆದಿದ್ದಾರೆ.
ನಕಲಿ ಟಿಆರ್ ಪಿ ಜಾಲದಲ್ಲಿ ರಿಪಬ್ಲಿಕ್ ಟಿವಿ ಜತೆಗೆ ಮರಾಠಿಯ ಇನ್ನೆರಡು ಸ್ಥಳೀಯ ಚಾನೆಲ್ ಗಳು ಸೇರಿವೆ ಎಂದು ಮುಂಬೈ ಪೊಲೀಸ್ ಕಮಿಷನರ್ ಪರಮ್ ವೀರ್ ಸಿಂಗ್ ತಿಳಿಸಿದ್ದಾರೆ.
ಈ ಮೂರು ಚಾನೆಲ್ ಗಳು ಹಣ ಕೊಟ್ಟು ಟಿಆರ್ ಪಿ ಹೆಚ್ಚಿಸುತ್ತಿದ್ದವು. ಈ ಜಾಲದಲ್ಲಿ ಬಿಎಆರ್ ಸಿ (ಟಿವಿ ರೇಟಿಂಗ್ ಮಾಪನ ಮಾಡುವ ಸಂಸ್ಥೆ)ಯ ಕೆಲ ಹಾಲಿ ಸಿಬ್ಬಂದಿ ಹಾಗೂ ಮಾಜಿ ಉದ್ಯೋಗಿಗಳು ಸೇರಿದ್ದಾರೆ. ಟಿಆರ್ ಪಿ ಯಂತ್ರ ಅಳವಡಿಸಿರುವ ಮನೆಗಳಲ್ಲಿ ಹಣಕೊಟ್ಟು ರಿಪಬ್ಲಿಕ್ ಟಿವಿ ನೋಡುವಂತೆ ಒತ್ತಡ ಹೇರಲಾಗುತ್ತಿತ್ತು. ಆ ಮೂಲಕ ತಮ್ಮ ಚಾನೆಲ್ ಗಳ ಟಿಆರ್ ಪಿ ಹೆಚ್ಚಿಸುತ್ತಿದ್ದರು ಎಂದು ಕಮಿಷನರ್ ತಿಳಿಸಿದ್ದಾರೆ.
ಮರಾಠಿ ಚಾನೆಲ್ ಗಳ ಮಾಲೀಕರನ್ನು ಈಗಾಗಲೇ ಬಂಧಿಸಿದ್ದು, ರಿಪಬ್ಲಿಕ್ ಟಿವಿಯ ಮಾಲೀಕರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.