ಮುಂಬೈನಿಂದ ಗೋವಾ ತಲುಪಲು ಕೇವಲ 7 ಗಂಟೆ ಸಾಕು: ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯೋಗ ಯಶಸ್ವಿ

ಮುಂಬೈ: ಗೋವಾ- ಮುಂಬೈ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜೂನ್‌ನಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ವರದಿಗಳಾಗಿವೆ. ಸೆಮಿ ಹೈಸ್ಪೀಡ್ ರೈಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಮತ್ತು ಮಡಗಾಂವ್ ನಡುವೆ ಚಲಿಸುತ್ತದೆ ಮತ್ತು ತೇಜಸ್ ಎಕ್ಸ್‌ಪ್ರೆಸ್‌ಗೆ ಹೋಲಿಸಿದರೆ ಮುಂಬೈ ಮತ್ತು ಗೋವಾ ನಡುವಿನ ಪ್ರಯಾಣದ ಸಮಯವನ್ನು ಕನಿಷ್ಠ 45 ನಿಮಿಷಗಳಷ್ಟು ಕಡಿಮೆ ಮಾಡುತ್ತದೆ.

ಮುಂಬೈ-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮಾರ್ಗದ ಪ್ರಯೋಗಗಳನ್ನು ಮಂಗಳವಾರ ಯಶಸ್ವಿಯಾಗಿ ನಡೆಸಲಾಯಿತು. ರೈಲು ಏಳು ಗಂಟೆಗಳಿಗಿಂತ ಸ್ವಲ್ಪವೇ ಹೆಚ್ಚು ಅವಧಿಯಲ್ಲಿ ನಗರಗಳ ನಡುವೆ ಏಕಮುಖ ಪ್ರಯಾಣವನ್ನು ನಡೆಸಿತು. ಇದೇ ವರ್ಷ ಜೂನ್ ನಿಂದ ರೈಲು ಜನರ ಪ್ರಯಾಣಕ್ಕೆ ಲಭ್ಯವಿರಬಹುದು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ಅಧಿಕಾರಿಯೊಬ್ಬರು, “ನಮ್ಮ ತಾತ್ಕಾಲಿಕ ವಂದೇ ಭಾರತ್ ಯೋಜನೆಯು ಛತ್ರಪತಿ ಶಿವಾಜಿ ಟರ್ಮಿನಲ್ ನಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನದ ಹೊತ್ತಿಗೆ ಮಡಗಾಂವ್‌ಗೆ ತಲುಪಬಹುದು. ಅಲ್ಲಿಂದ ರೈಲು ಅದೇ ದಿನ ಛತ್ರಪತಿ ಶಿವಾಜಿ ಟರ್ಮಿನಲ್ ಗೆ ಹಿಂದಿರುಗುವ ಪ್ರಯಾಣವನ್ನು ಪುನರಾರಂಭಿಸುತ್ತದೆ ಹಾಗೂ ರೈಲು ಮಧ್ಯರಾತ್ರಿ ಹೊತ್ತಿಗೆ ತಲುಪುವ ನಿರೀಕ್ಷೆಯಿದೆ” ಎಂದರು.

ಪ್ರಸ್ತುತ, ತೇಜಸ್ ಎಕ್ಸ್‌ಪ್ರೆಸ್ ಸಿಎಸ್‌ಎಂಟಿಯಿಂದ ಬೆಳಿಗ್ಗೆ 5.50 ಕ್ಕೆ ಹೊರಟು ಮಧ್ಯಾಹ್ನ 2.40 ಕ್ಕೆ ಮಡಗಾಂವ್‌ಗೆ ತಲುಪುತ್ತದೆ. ಎರಡು ನಗರಗಳ ನಡುವಿನ 765 ಕಿಮೀ ದೂರವನ್ನು ಕ್ರಮಿಸಲು ರೈಲು ಸುಮಾರು 8 ಗಂಟೆ 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಹಿಂತಿರುಗುವಾಗ, ಅದು ಮಧ್ಯಾಹ್ನ 3.15 ಕ್ಕೆ ಮಡಗಾಂವ್‌ನಿಂದ ಹೊರಟು ಮಧ್ಯರಾತ್ರಿ ಸಿಎಸ್‌ಎಂಟಿ ತಲುಪುತ್ತದೆ.