ಮುಂಬೈ: ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಒಂದು ಲೀಟರ್ ಹಾಲನ್ನು ಆರ್ಡರ್ ಮಾಡಲು ಪ್ರಯತ್ನಿಸುವಾಗ ತಮ್ಮ ಬ್ಯಾಂಕ್ ಖಾತೆಗಳಿಂದ 18.5 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ವಡಾಲಾ ನಿವಾಸಿಯಾಗಿರುವ ಮಹಿಳೆ (71 ವರ್ಷ) ಈ ತಿಂಗಳ ಆರಂಭದಲ್ಲಿ ಆನ್‌ಲೈನ್ ವಿತರಣಾ ಅಪ್ಲಿಕೇಶನ್‌ನಿಂದ ಹಾಲನ್ನು ಆರ್ಡರ್ ಮಾಡಲು ಪ್ರಯತ್ನಿಸಿದಾಗ ಎರಡು ದಿನಗಳಲ್ಲಿ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ದೋಚಿ ವಂಚಿಸಲಾಗಿದೆ.
ಹಾಲು ಕಂಪನಿಯ ಕಾರ್ಯನಿರ್ವಾಹಕ ದೀಪಕ್ ಎಂದು ಗುರುತಿಸಿಕೊಂಡ ವ್ಯಕ್ತಿಯಿಂದ ಆಗಸ್ಟ್ 4 ರಂದು ಮಹಿಳೆಗೆ ಕರೆ ಬಂದಿದ್ದು, ಹಾಲನ್ನು ಆರ್ಡರ್ ಮಾಡಲು ವಿವರಗಳನ್ನು ನೀಡುವಂತೆ ಅವರ ಮೊಬೈಲ್‌ಗೆ ಲಿಂಕ್ ಕಳುಹಿಸಿದ್ದಾರೆ. ಕರೆಯನ್ನು ಕಡಿತಗೊಳಿಸದೆ ಲಿಂಕ್ ಅನ್ನು ಕ್ಲಿಕ್ ಮಾಡುವಂತೆ ಮತ್ತು ಮುಂದಿನ ಸೂಚನೆಗಳನ್ನು ಅನುಸರಿಸಲು ಮಹಿಳೆಗೆ ಸೂಚಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಎಲ್ಲ ಮೂರು ಬ್ಯಾಂಕ್ ಖಾತೆಗಳಿಂದ ದೂರುದಾರರು ಒಟ್ಟು 18.5 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
ಮಹಿಳೆ ತನ್ನ ಮೊಬೈಲ್ ಫೋನ್‌ಗೆ ಬಂದ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ಆರೋಪಿಯು ದೂರುದಾರರ ಫೋನ್ ಅನ್ನು ಹ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ದೂರಿನ ಆಧಾರದ ಮೇಲೆ, ಪೊಲೀಸರು ಈ ವಾರದ ಆರಂಭದಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.












