ಮುಂಬೈ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಪರಿಣಾಮ ಉಂಟಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಉದ್ವಿಗ್ನತೆಯ ಪರಿಣಾಮ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಉಳಿದ ಪಂದ್ಯಗಳನ್ನು ಬಿಸಿಸಿಐ ಅಮಾನತು ಮಾಡಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪಂದ್ಯಾವಳಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ನಂತರ, ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಅಭಿಮಾನಿಗಳ ಸುರಕ್ಷತೆಯೇ ಪ್ರಮುಖ ಕಾಳಜಿ ಎಂದು ಘೋಷಿಸಿದೆ.
ಗುರುವಾರ (ಮೇ 08) ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಜಮ್ಮು ಮತ್ತು ಪಠಾಣ್‌ಕೋಟ್‌ನಲ್ಲಿ ವಾಯುದಾಳಿ ಎಚ್ಚರಿಕೆಯ ಕಾರಣದಿಂದ ಮಧ್ಯದಲ್ಲೇ ರದ್ದು ಮಾಡಲಾಗಿದೆ.ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಆರಂಭದಲ್ಲಿ ಮೇ 9 ರಂದು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಯೋಜಿಸಿದಂತೆ ನಡೆಯಲಿದೆ ಎಂದು ಸೂಚಿಸಿದ್ದರೂ, ಹದಗೆಟ್ಟ ಭದ್ರತಾ ಪರಿಸ್ಥಿತಿಯು ಹೊಸ ನಿರ್ಧಾರಕ್ಕೆ ಕಾರಣವಾಗಿದೆ.
ಮುಂದಿನ ಸೂಚನೆ ಬರುವವರೆಗೂ ಲೀಗ್ ಅನ್ನು ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿದೆ ಎಂದು ಬಿಸಿಸಿಐ ದೃಢಪಡಿಸಿದೆ.
ಹಲವಾರು ಅಂತಾರಾಷ್ಟ್ರೀಯ ಆಟಗಾರರು ಮತ್ತು ತರಬೇತುದಾರರು ಭಾಗಿಯಾಗಿರುವುದರಿಂದ ಈ ನಿರ್ಧಾರವು ವಿದೇಶಿ ಕ್ರಿಕೆಟ್ ಮಂಡಳಿಗಳ ಗಮನವನ್ನೂ ಸೆಳೆದಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಶುಕ್ರವಾರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತದಲ್ಲಿರುವ ತನ್ನ ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದೆ.












