ಮುಂಬೈ:ಹಿಂದಿ ಬಿಗ್ ಬಾಸ್ 13 ರ ಸ್ಪರ್ಧಿ ಹಾಗೂ ‘ಕಾಂಟಾ ಲಗಾ’ ಖ್ಯಾತಿಯ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನ’

ಮುಂಬೈ: ‘ಕಾಂಟಾ ಲಗಾ’ ಹಾಡಿನ ಮೂಲಕ ದೇಶಾದ್ಯಂತ ಜನಪ್ರಿಯರಾಗಿದ್ದ ಖ್ಯಾತ ನಟಿ ಮತ್ತು ಹಿಂದಿ ಬಿಗ್ ಬಾಸ್ 13ರ ಸ್ಪರ್ಧಿ ಶೆಫಾಲಿ ಜರಿವಾಲಾ (42) ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮುಂಬೈನ ಅಂಧೇರಿ ಲೋಖಂಡ್‌ವಾಲಾದಲ್ಲಿರುವ ತಮ್ಮ ನಿವಾಸದಲ್ಲಿದ್ದ ಶೆಫಾಲಿ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸದ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ರವಾನಿಸಲಾಗಿದೆ.

ರಾತ್ರೋರಾತ್ರಿ ತಾರೆಯಾದ ಪ್ರತಿಭೆ:
2002ರಲ್ಲಿ ಬಿಡುಗಡೆಯಾದ ‘ಕಾಂಟಾ ಲಗಾ’ ರೀಮಿಕ್ಸ್ ಹಾಡು ಶೆಫಾಲಿ ಜರಿವಾಲಾ ಅವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿತ್ತು. ಈ ಒಂದೇ ಹಾಡಿನಿಂದ ಅವರು ದೇಶದ ಮನೆಮಾತಾಗಿದ್ದರು. ನಂತರ ‘ಮುಜ್ಸೆ ಶಾದಿ ಕರೋಗಿ’ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಮತ್ತು ಸಂಗೀತ ಆಲ್ಬಂಗಳಲ್ಲಿ ಅವರು ಕಾಣಿಸಿಕೊಂಡಿದ್ದರು.ಕಿರುತೆರೆಯಲ್ಲೂ ಸಕ್ರಿಯರಾಗಿದ್ದ ಶೆಫಾಲಿ, ‘ಬಿಗ್ ಬಾಸ್ 13’ ಮತ್ತು ‘ನಚ್ ಬಲಿಯೇ 5’ ನಂತಹ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಪ್ರೇಕ್ಷಕರ ಮನಗೆದ್ದಿದ್ದರು.

ಕನ್ನಡದ ನಂಟು:
ಶೆಫಾಲಿ ಜರಿವಾಲಾ ಅವರು ಕನ್ನಡ ಚಿತ್ರರಂಗದೊಂದಿಗೂ ನಂಟು ಹೊಂದಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ‘ಹುಡುಗರು’ ಚಿತ್ರದ ಸೂಪರ್‌ಹಿಟ್ ಗೀತೆ ‘ನಾ ಬೋರ್ಡ್ ಇರದ ಬಸ್ಸನು’ ಹಾಡಿನಲ್ಲಿ ಹೆಜ್ಜೆ ಹಾಕುವ ಮೂಲಕ ಕನ್ನಡಿಗರನ್ನು ರಂಜಿಸಿದ್ದರು.

ವೈಯಕ್ತಿಕ ಜೀವನ:
1982ರ ಡಿಸೆಂಬರ್ 15ರಂದು ಜನಿಸಿದ ಶೆಫಾಲಿ, 2004ರಲ್ಲಿ ಗಾಯಕ ಹರ್ಮೀತ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಕೆಲ ವರ್ಷಗಳ ನಂತರ ಅವರಿಂದ ವಿಚ್ಛೇದನ ಪಡೆದು, 2014ರಲ್ಲಿ ನಟ ಪರಾಗ್ ತ್ಯಾಗಿ ಅವರನ್ನು ಮದುವೆಯಾಗಿದ್ದರು. ಶೆಫಾಲಿ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.