ಮುಂಬೈ: ವಾಣಿಜ್ಯ ನಗರಿ ಮುಂಬೈ ಸತತ ಮೂರನೇ ದಿನವಾದ ಸೋಮವಾರವೂ (ಆ.18) ಭಾರೀ ಮಳೆಗೆ ನಲುಗಿ ಹೋಗಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿರುವುದಾಗಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆ ಮತ್ತು ನೀರಿನಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಸತತ ಮಳೆಯ ಹಿನ್ನಲೆಯಲ್ಲಿ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೇ ಅನಗತ್ಯವಾಗಿ ಜನರು ಮನೆಯಿಂದ ಹೊರ ಬರದಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ರೈಲ್ವೆ ಹಳಿಗಳು ಜಲಾವೃತಗೊಂಡಿದ್ದರಿಂದ ಹಲವು ಪ್ರದೇಶಗಳಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮುಂಬೈ ನಗರದ ವಿಲೆ ಪಾರ್ಲೆ ಸಮೀಪದ ವೆಸ್ಟರ್ನ್ ಎಕ್ಸ್ ಪ್ರೆಸ್ ಹೈವೇಯಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದ್ದು, ಸಯನ್ ಗಾಂಧಿ ಮಾರುಕಟ್ಟೆ ಪ್ರದೇಶ ಜಲಾವೃತಗೊಂಡಿರುವುದಾಗಿ ವರದಿ ತಿಳಿಸಿದೆ.
ತಗ್ಗು ಪ್ರದೇಶಗಳಾದ ಅಂಧೇರಿ ಸಬ್ ವೇ, ಲೋಖಂಡ್ವಾಲಾ ಕಾಂಪ್ಲೆಕ್ಸ್ ಪ್ರದೇಶ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಂದು ವರದಿ ತಿಳಿಸಿದೆ. ಚೆಂಬೂರ್ ನಲ್ಲಿ ದಾಖಲೆಯ 65 ಮಿಲಿ ಮೀಟರ್ ಮಳೆಯಾಗಿದ್ದು, ಶಿವಾಜಿ ನಗರ್ ಪ್ರದೇಶದಲ್ಲಿ 50 ಮಿಲಿ ಮೀಟರ್ ಮಳೆಯಾಗಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.












