ಮಣಿಪಾಲ: ಮಹಾಕವಿ ಸುಬ್ರಹ್ಮಣ್ಯ ಭಾರತಿಯವರ ಜಯಂತಿಯ ಸಂದರ್ಭದಲ್ಲಿ ಆಚರಿಸಲಾಗುತ್ತಿರುವ ‘ಭಾರತೀಯ ಭಾಷಾ ಉತ್ಸವ್’ನ ಅಂಗವಾಗಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರಸಾರಾಂಗ ಘಟಕವಾದ ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಪ್ರ-ದೇಶ ಭಾಷಾ ಕವಿಗೋಷ್ಠಿ ‘ಸುಮಧುರ ಭಾಷಿಣೀಂ’ ಅನ್ನು ಡಿ. 12ರಂದು ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಆಯೋಜಿಸಿಸಲಾಗಿತ್ತು.
ಈ ಕವಿಗೋಷ್ಠಿಯಲ್ಲಿ ಸುಜಯೀಂದ್ರ ಹಂದೆ ಅವರು ಕುಂದಗನ್ನಡವನ್ನು, ಅನುಬೆಳ್ಳೆ , ವಾಸಂತಿ ಅಂಬಲಪಾಡಿ, ಪೂರ್ಣಿಮಾ ಜನಾರ್ದನ್ ತುಳುವಿನ ವಿವಿಧ ಪ್ರಭೇದಗಳನ್ನು, ಯೂಕೂಬ್ ಖಾದರ್ ಬ್ಯಾರಿಭಾಷೆಯನ್ನು, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಕೊಂಕಣಿಯನ್ನು , ಪಾಂಗಾಳ ಬಾಬು ಕೊರಗ- ಕೊರಗ ಭಾಷೆಯನ್ನು, ಜಯದೇವ ಹಿರಣ್ಯ ಹವಿಗನ್ನಡವನ್ನು, ರುಚಾ ಸಹಸ್ರಬುಧೆ ಮರಾಠಿ ಭಾಷೆಯನ್ನು ಪ್ರತಿನಿಧಿಸಿ ಕವಿತೆಗಳನ್ನು ವಾಚಿಸಿದರು. ವಂದೇಮಾತರಂನ ಪ್ರ-ದೇಶಭಾಷಾ ಅವತರಣಿಕೆಗಳನ್ನು ಕೂಡ ಪ್ರಸ್ತುತಪಡಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಭಾಷೆಗೂ ಭಾವಕ್ಕೂ ಸಂಬಂಧವಿದೆ. ಶಾಬ್ದಿಕ ಭಾಷೆಯಲ್ಲಿಯೂ ಹೇಳಲಾಗದ ಭಾವಗಳನ್ನು ವ್ಯಕ್ತಪಡಿಸಲು ಕವಿತೆಗಳ ಮೊರೆಹೋಗುತ್ತೇವೆ. ಪ್ರಸ್ತುತ ಕವಿಗೋಷ್ಠಿಯಲ್ಲಿ ಉಡುಪಿ ಜಿಲ್ಲೆಯ ಆಸುಪಾಸಿನ ಭಾಷೆಗಳ ಮೂಲಕ ನಾವು ರಾಷ್ಟ್ರವನ್ನು ಪ್ರತಿನಿಧಿಸಿದಂತಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಮಾಹೆಯ ಭಾಷಾ ವಿಭಾಗದ ಮುಖ್ಯಸ್ಥ ಪ್ರೊ. ರಾಹುಲ್ ಪುಟ್ಟಿ ಮಾತನಾಡಿ, ಭಾಷೆ ಎಂಬುದು ಕೇವಲ ಸಂವಹನದ ಉಪಕರಣವಲ್ಲ, ಅದು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಮಾಧ್ಯಮವೂ ಹೌದು. ಮಾಹೆಯು ಸ್ಥಳೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಅಧ್ಯಯನ ಕೇಂದ್ರವನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲ್ ಯೂನಿವರ್ಸಲ್ ಪ್ರೆಸ್‌ನ ಪ್ರಧಾನ ಸಂಪಾದಕಿ ಡಾ. ನೀತಾ
ಇನಾಂದಾರ್ ಮಾತನಾಡಿ, ಭಾರತ ಬಹುಭಾಷೆಗಳ ದೇಶ. ಒಂದೊಂದು ಭಾಷೆಯೂ ಒಂದೊಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಭಾರತದ ಬಹು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಬಹುಭಾಷೆಗಳನ್ನು ತಿಳಿದಿರಬೇಕಾಗುತ್ತದೆ. ಮಣಿಪಾಲ್ ಯೂನಿವರ್ಸಲ್ ಪ್ರೆಸ್ ಈ ನಿಟ್ಟಿನಲ್ಲಿ ರಚನಾತ್ಮಕ ಹೆಜ್ಜೆ ಇರಿಸಿದ್ದು ಬಹುಭಾಷೆಗಳ ಪ್ರಕಟಣೆಗಳನ್ನು ಹೊರತರುವ ಯೋಜನೆಯನ್ನು ಹೊಂದಿದೆ ಎಂದರು.
ಮಣಿಪಾಲ್ ಯೂನಿವರ್ಸಲ್ ಪ್ರೆಸ್‌ನ ಮಾರ್ಕೆಂಟಿಗ್ ಅಸಿಸ್ಟೆಂಟ್ ಕಾವ್ಯ ಡಿ. ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.