ಮುಳ್ಳೂರು-ಕುದುರೆಮುಖ ರಸ್ತೆ ಅಗಲೀಕರಣ ಮಾಡಿ,ಬಂಡೆ ಒಡೆದರೆ ಕುದುರೆಮುಖವೂ ಚಾರ್ಮಾಡಿಯಂತಾಗುತ್ತೆ ಎಚ್ಚರ !

ಮೊನ್ನೆ ಕುದುರೆಮುಖದ ರಾಷ್ಟ್ರೀಯ ಉದ್ಯಾವನದ  ರಸ್ತೆಯಲ್ಲಿ ಬಂಡೆಗೆ ಬಸ್ ಹೊಡೆದು ಅಫಘಾತ ನಡೆದದ್ದೇ ತಡ, ಈ ಬಂಡೆಗಳನ್ನು ತೆಗೆದು ಇಡೀ ರಸ್ತೆ ಅಗಲೀಕರಣ ಮಾಡಬೇಕು ಎಂದು ಬೊಬ್ಬಿಡುವವರು ಜಾಸ್ತಿಯಾಗಿದ್ದಾರೆ. ಕೆಲವೊಂದು ಪತ್ರಿಕಾ ಮಾಧ್ಯಮಗಳಂತೂ ಆ ಬಂಡೆಗಲ್ಲಿನ ಹಿಂದೆ ಬಿದ್ದು ಅಗಲೀಕರಣ ಆಗದಿದ್ದರೆ  ವಾಹನ ಚಾಲಕರೆಲ್ಲಾ ಸಾಯುತ್ತಾರೆ ಎನ್ನುವ ಧ್ವನಿಯಲ್ಲಿ ವರದಿ ಬರೆಯುತ್ತಿವೆ. ಆದರೆ ಇಲ್ಲಿ ಅಗಲೀಕರಣವಾದರೆ, ರಕ್ಷಾಕವಚವಾದ ಬಂಡೆ ತೆಗೆದರೆ ಇಡೀ ಕುದುರೆಮುಖ ಯಾಕೆ?ಕುದುರೆಮುಖ ಸುತ್ತಲಿನ ಊರುಗಳಿಗೆ ಆಪತ್ತು ಕಾದಿದೆ ಎಂದು ಎಚ್ಚರಿಸುವುದನ್ನು ಆ ಮಾಧ್ಯಮಗಳು ಮರೆತಿವೆ.

ಈ ಬಂಡೆಯೇ ರಕ್ಷಾಕವಚ:

ಯುನೆಸ್ಕೋ ಪಾಪಂಪರಿಕ ತಾಣವಾದ, ಜೀವಜಾಲಗಳ ತವರೂರಾದ ಕುದುರೆಮುಖ ನಿಂತಿರುವುದೇ ಅಪಾರ ಪ್ರಮಾಣದ ಬಂಡೆಗಲ್ಲು ಮತ್ತು ಹುಲ್ಲುಗಳಿಂದ.  ಕುದುರೆಮುಖದ ರಸ್ತೆಯ ರಕ್ಷಣಾ ಕವಚವಾಗಿರುವ ಬಂಡೆಗಳನ್ನು ಏಕಾಏಕಿ ತೆಗದು ಹಾಕೋಕೆ ಅದೇನು ನಮ್ಮ ಮನೆಯ ಕಡೆಯುವ ಕಲ್ಲಲ್ಲ. ಪ್ರಕೃತಿಯ ಅಪೂರ್ವ ಸೃಷ್ಟಿ. ಕುದುರೆಮುಖದ ಇಂತಹ ಕಲ್ಲುಗಳು ಬರೀ‌ ಕಲ್ಲಲ್ಲ. ಆ ಕಲ್ಲುಗಳು ಅಪಾರ ಪ್ರಮಾಣದ ನೀರನ್ನು ತನ್ನೊಡಲಲ್ಲಿ ಹಿಡಿದಿಟ್ಟುಕೊಂಡಿದೆ. ಮಣ್ಣಿನ ಸವಕಳಿಯಾಗದಂತೆ, ನಮ್ಮ ಬದುಕು ಜಾರದಂತೆ ಕಾಪಾಡುತ್ತಿರುವುದೇ ಈ ಕಲ್ಲುಗಳು. ಮಳೆಗಾಲದಲ್ಲಂತೂ ಈ ಕಲ್ಲ ಮೇಲೆ ಬೆಳೆಯುವ ಹುಲ್ಲು ಕೂಡ ನೀರನ್ನು ಹಿಡಿದಿಟ್ಟುಕೊಳ್ಳುತ್ತಿವೆ. ಇದರ ಕೆಳಗಿನ ಜಲ ಪ್ರಮಾಣ, ನೀರಿನ ಒರತೆ ಎಷ್ಟಿದೆ ಅಂದರೆ‌ ಒಂದು‌ ವೇಳೆ ಈ‌ ಕಲ್ಲಿನ ತಂಟೆಗೆ ಹೋದರೆ, ಕಲ್ಲನ್ನು ಒಡೆದರೂ ಜಲಸ್ಪೋಟ ಆಗುವ ಸಾಧ್ಯತೆಗಳೇ ಅಧಿಕ.

 

“ಇಂತಹ ಕಲ್ಲುಗಳನ್ನು ಉರುಳಿಸಿದ್ದರಿಂದಲೇ ಹಾಗೂ ಮನಷ್ಯನ ವಿಪರೀತ ಹಸ್ತಕ್ಷೇಪದಿಂದಲೇ ಈ ಸಲ‌ ಚಾರ್ಮಾಡಿಯಲ್ಲಿ ಜಲಸ್ಪೋಟವಾಗಲು ಮುಖ್ಯ ಕಾರಣ. ಆಗುಂಬೆ, ಮತ್ತು ಕುದುರೆಮುಖದಲ್ಲಿಯೂ ಅಗಲೀಕರಣ ಅಂತೆಲ್ಲ ನಡೆದರೆ  ಮುಂದೆ ಚಾರ್ಮಾಡಿಯ ಗತಿ ಕುದುರೆಮುಖಕ್ಕೂ ಬರುತ್ತದೆ.ಕುದುರೆಮುಖ ಜೀವಜಾಲಗಳ ಬಗ್ಗೆ ಸರಿಯಾಗಿ ತಿಳಿದುಕೊಂಡರೆ ಕುದುರೆಮುಖ ನಮಗೆಷ್ಟು ರಕ್ಷೆಯಾಗಿದೆ ಎನ್ನುವುದು ತಿಳಿಯುತ್ತದೆ” ಎನ್ನುತ್ತಾರೆ ಸಹ್ಯಾದ್ರಿ ಸಂಚಯದ ಮುಖ್ಯಸ್ಥ, ಪರಿಸರ ಹೋರಾಟಗಾರ ದಿನೇಶ್ ಹೊಳ್ಳರು. 

ಅಫಫಾತಕ್ಕೆ ಕಾರಣ ಅಜಾಗೃತೆ:

ಅಷ್ಟಕ್ಕೂ ರಾಷ್ಟ್ರೀಯ ಉದ್ಯಾನದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಮಾಡೋಕೆ ಅನುಮತಿ ಇಲ್ಲ. ಒಂದು ವೇಳೆ ಮಾಡಿದರೂ ಇಡೀ ಜೀವವೈವಿದ್ಯತೆಗೆ ಧಕ್ಕೆಯಾಗುತ್ತದೆ. ಅಗಲೀಕರಣವೇ ಎಲ್ಲದ್ದಕ್ಕೂ ಮದ್ದು ಅನ್ನೋ ಹುಳ‌ ಬಹುತೇಕರ‌ ತಲೆಯಲ್ಲಿರೋದು ದುರದೃಷ್ಟ. ಅಷ್ಟಕ್ಕೂ ಇದುವರೆಗೆ ಈ ರಸ್ತೆಯಲ್ಲಿ‌ ಅಪಘಾತವಾದದ್ದು ವಾಹನ ಚಾಲಕರ ಅತೀಯಾದ ಅಜಾಗರೂಕತೆಯಿಂದಲೇ ಹೊರತು ಬೇರೇನೂ ಅಲ್ಲ.  ಈ ತಿರುವಲ್ಲಿ ಕೆಲವರು ಜಾಗರೂಕತೆಯಿಂದ ವಾಹನ ಚಲಾಯಿಸುವುದನ್ನು ನಾವು ತುಂಬಾ ಸಲ ನೋಡಿದ್ದೇವೆ.

ಬಂಡೆಯಿಂದಲೇ ಸಾವು ಸಂಭವಿಸುದಿದ್ದರೆ ದಿನನಿತ್ಯ ಎಷ್ಟೋ ಮಂದಿ ಸಾಯಬೇಕಿತ್ತು. ಆದರೆ ಹಾಗೇನು ಆಗಿಲ್ಲ. ಹಾಗಿರುವಾಗ ತಪ್ಪೆಲ್ಲಾ ಈ ರಸ್ತೆಯದ್ದೆ ಎಂದು ಹೇಳುವುದು ಬಾಲಿಶ.  ಭವಿಷ್ಯದ ಜೀವಜಲವನ್ನು,ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಈ ಅಪೂರ್ವ ಬಂಡೆಯೇ ಸಾವಿಗೆ ಕಾರಣ ಎನ್ನುವುದು ವಿತಂಡವಾದ. ಆದರೆ ಮಾಧ್ಯಮಗಳು ಬಂಡೆಯೇ ಎಲ್ಲದಕ್ಕೂ ಕಾರಣ ಅಂತ ಬರೆಯುತ್ತಿರುವುದು ದಿಕ್ಕು ತಪ್ಪಿಸುವ ಕೆಲಸ. ಸದ್ಯಕ್ಕೆ ಕುದುರೆಮುಖ ಅರಣ್ಯ ಅದರ ಪಾಡಿಗದು ಖುಷಿಯಿಂದಿದೆ‌. ಇಲ್ಲಿಯೂ ಅಭಿವೃದ್ದಿ ಅಂತೆಲ್ಲಾ ಹೇಳಿ ಕಾಡು ಹಾಳಾಗಲು ಆಸ್ಪದ ನೀಡಿದರೆ ಕಳೆದ ಸಲ ಚಾರ್ಮಾಡಿ, ಕೊಡಗಿನಲ್ಲಾದ ದುರಂತ ಕುದುರೆಮುಖದಲ್ಲೂ ಆಗುವ ದಿನ ದೂರವಿಲ್ಲ.

-ಪ್ರಸಾದ್ ಶೆಣೈ ಆರ್.ಕೆ