ಮುಲ್ಕಿ ಸುಖಾನಂದ ಶೆಟ್ಟಿ ಕೊಲೆ ಪ್ರಕರಣ: 19 ವರ್ಷಗಳ ಬಳಿಕ ತಲೆಮೆಲೆಸಿಕೊಂಡಿದ್ದ ಆರೋಪಿಯ ಬಂಧನ

ಸುರತ್ಕಲ್: ಸಂಘಪರಿವಾರದ ಮುಖಂಡ ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಅಡ್ಡೂರು ಟಿಬೆಟ್ ಕಾಲನಿ ನಿವಾಸಿ ಪ್ರಸಕ್ತ ಬಜ್ಪೆ ಕಿನ್ನಿಪದವಿನಲ್ಲಿ ನೆಲೆಸಿರುವ ಅಬ್ದುಲ್ ಸಲಾಂ ಅಡ್ಡೂರು (47) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ಸುಖಾನಂದ್ ಶೆಟ್ಟಿ ಎಂಬವರನ್ನು ಕಬೀರ್ ಹಾಗೂ ಆತನ ಸಹಚರರು ಕೊಲೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳ ಪೈಕಿ ಪ್ರಮುಖ ಆರೋಪಿ ಕಬೀರ್ ಎಂಬಾತನಿಗೆ ಲತೀಫ್ ಯಾನೆ ಅಡ್ಡೂರು ಲತೀಫ್ ಹಾಗೂ ಅಬ್ದುಲ್ ಸಲಾಂ ಅಡ್ಡೂರು ಸಹೋದರರು ಅಡ್ಡೂರು ಟಿಬೇಟ್ ಕಾಲನಿಯಲ್ಲಿರುವ ಮನೆಯಲ್ಲಿ ಆಶ್ರಯ ನೀಡಿ 2 ದಿನ ಮನೆಯಲ್ಲಿರಿಸಿಕೊಂಡು ಪೊಲೀಸರಿಂದ ತಪ್ಪಿಸಿ ತಲೆಮರೆಸಿಕೊಳ್ಳಲು ಸಹಕಾರ ನೀಡಿದ್ದರು. ನಂತರ ಕಬೀರ್‌ನನ್ನು ವಾಹನದಲ್ಲಿ ಕೇರಳದ ಕಾಸರಗೋಡು ಬಳಿ ಬಿಟ್ಟು ನಂತರ ತಲೆ ಮರೆಸಿಕೊಳ್ಳಲು ಸಹಾಯ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿ ಅಬ್ದುಲ್ ಸಲಾಂ ವಿರುದ್ಧ ಸುರತ್ಕಲ್ ಪೊಲೀಸರು ರೌಡಿಶೀಟ್ ತೆರೆದಿದ್ದರು. ಆರೋಪಿಯು ಸುಮಾರು 19ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದುದರಿಂದ ಈತನ ವಿರುದ್ಧ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.

ಈ ಬಗ್ಗೆ ಖಚಿತ ಮಾಹಿತಿ ಅರಿತ ಪೊಲೀಸರು ಆತನ ಮನೆಗೆ ದಾಳಿ ಮಾಡಿ ಆತನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.