ಆಮ್ ಆದ್ಮಿ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ನೇಮಕ

ಬೆಂಗಳೂರು: ಚಿತ್ರರಂಗದ ಹಿರಿಯ ನಟ ಹಾಗೂ ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ಅವರನ್ನು ಆಮ್ ಆದ್ಮಿ ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದುವರೆಗೆ ರಾಜ್ಯಾಧ್ಯಕ್ಷರಾಗಿದ್ದ ಪೃಥ್ವಿ ರೆಡ್ಡಿ ಅವರಿಗೆ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ನೀಡಲಾಗಿದೆ.

ಈ ಸಂಬಂಧ ಬುಧವಾರ ರಾತ್ರಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಡಾ.ಸಂದೀಪ್‌ ಪಾಠಕ್‌ ಪ್ರಕಟಣೆ ಹೊರಡಿಸಿದ್ದಾರೆ.

ಈವರೆಗೆ ಪಕ್ಷದ ಪ್ರಚಾರ ಮತ್ತು ಜನಸಂಪರ್ಕ ವಿಭಾಗದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ಮುಖ್ಯಮಂತ್ರಿ ಚಂದ್ರು ಅವರಿಗೆ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಅಧ್ಯಕ್ಷರಾಗಿದ್ದ ಪೃಥ್ವಿರೆಡ್ಡಿ ಪಕ್ಷದ ಸಂಘಟನೆಗಾಗಿ ಸಾಕಷ್ಟು ಕಾರ್ಯತಂತ್ರ ರೂಪಿಸಿದರೂ ಅದು ಪಕ್ಷಕ್ಕೆ ಪ್ರಯೋಜನ ನೀಡಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ 209 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದರೂ ಠೇವಣಿ ಕಳೆದುಕೊಂಡರು. ಆ ಕಾರಣದಿಂದ ಮುಂಬರುವ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು ಚಂದ್ರು ಅವರಿಗೆ ಸಾರಥ್ಯ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯದ ದಕ್ಷಿಣ ವಿಭಾಗದ ಸಂಘಟನಾ ಕಾರ್ಯದರ್ಶಿಯನ್ನಾಗಿ ಡಾ.ಬಿ.ಟಿ.ನಾಗಣ್ಣ ಮತ್ತು ಉತ್ತರ ವಿಭಾಗದ ಸಂಘಟನಾ ಕಾರ್ಯದರ್ಶಿಯನ್ನಾಗಿ ಅರ್ಜುನ್‌ ಪರಪ್ಪ ಹಲಗಿಗೌಡರ್‌ ಅವರನ್ನು ನೇಮಿಸಲಾಗಿದೆ.