ಮೂಕಾಂಬಿಕಾ ಸೇವಾ ಸಹಕಾರಿ ಸಂಘದ ವತಿಯಿಂದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಕೊಲ್ಲೂರು ಗ್ರಾ.ಪಂ ವ್ಯಾಪ್ತಿಯ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮವು ಶುಕ್ರವಾರ ಸಂಘದ ಕಚೇರಿಯಲ್ಲಿ ಜರುಗಿತು.

ಅಗತ್ಯ ವಸ್ತುಗಳ ಕಿಟ್ ವಿತರಿಸಿ ಮಾತನಾಡಿದ ಶಾಸಕ ಸುಕುಮಾರ ಶೆಟ್ಟಿ, ಆಶಾ ಕಾರ್ಯಕರ್ತೆಯರು, ವೈದ್ಯರು, ಪೊಲೀಸ್ ಹಾಗೂ ಅಧಿಕಾರಿಗಳ ಪ್ರಾಮಾಣಿಕ ಸೇವೆಯಿಂದಾಗಿ ಇಂದು ಉಡುಪಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗಿದೆ. ಲಾಕ್‍ಡೌನ್‍ನಿಂದಾಗಿ ಜನರಿಗೆ ಕೆಲಸವಿಲ್ಲದೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಕೊಲ್ಲೂರಿನ ಆಯ್ದ ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವ ಮೂಕಾಂಬಿಕಾ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯ ಎಂದರು.

ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಮಾನಸಿಕ ಧೈರ್ಯ ತೆಗೆದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ ಕೊರೋನಾ ಮಹಾಮಾರಿಯನ್ನು ನಿಯಂತ್ರಿಸೋಣ ಎಂದು ಶಾಸಕ ಸುಕುಮಾರ್ ಶೆಟ್ಟಿ ಇದೇ ವೇಳೆಯಲ್ಲಿ ಮನವಿ ಮಾಡಿಕೊಂಡರು.

ಕೊಲ್ಲೂರು ಗ್ರಾಮಪಂಚಾಯತ್ ವ್ಯಾಪ್ತಿಯ ಸುಮಾರು 100 ಬಡ ಕುಟುಂಬಗಳಿಗೆ ಹಾಗೂ 20 ಮಂದಿ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ವಸ್ತುಗಳ ಕಿಟ್ ಅನ್ನು ವಿತರಿಸಲಾಯಿತು. ಇದೇ ವೇಳೆಯಲ್ಲಿ ಕೊರೋನಾ ಮಹಾಮಾರಿ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಶಾಸಕ ಸುಕುಮಾರ್ ಶೆಟ್ಟಿಯವರನ್ನು ಅಭಿನಂದಿಸಲಾಯಿತು.

ಆಹಾರ ಕಿಟ್ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಮೂಕಾಂಬಿಕಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರೋಹಿತ್ ಜೊಯಿಷಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷ ಸಂದೀಪ್ ಆರ್, ನಿರ್ದೇಶಕರುಗಳಾದ ಅರುಣ್ ಕುಮಾರ್ ಶೆಟ್ಟಿ, ನಾಗೇಶ್ ದಳಿ, ಶ್ರೀದೇವಿ ಭಟ್, ಅರುಣ್ ಕುಮಾರ್ ಶೆಟ್ಟಿ, ರಾಜೇಶ್ ನಾಯ್ಕ್, ದುರ್ಗಿ, ಸಂಘದ ವ್ಯವಸ್ಥಾಪಕ ಗಣೇಶ್ ಶ್ಯಾನುಭಾಗ್, ಕೊಲ್ಲೂರ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಕಾಶ್, ಗ್ರಾಮಕರಣಿಕ ವೀರೇಶ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಜೇಶ್, ಕೊಡಚಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಗಾಣಿಗ, ವಿಶ್ವೇಶ್ವರ ಹೆಗ್ಡೆ, ಜೀಪು ಮತ್ತು ಮಾಲಕರ ಸಂಘದ ಅಧ್ಯಕ್ಷ ಎಸ್. ಕುಮಾರ್, ಟ್ಯಾಕ್ಸಿ ಮತ್ತು ಚಾಲಕರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಶಿವರಾಮ್ ಕೃಷ್ಣ ಭಟ್, ವಿಠಲ್ ಗೌಡ, ವಿಜಯ್ ಕುಮಾರ್ ಶೆಟ್ಟಿ ಇದ್ದರು.

ಗಣೇಶ್ ಶ್ಯಾನುಭಾಗ್ ಸ್ವಾಗತಿಸಿದರು, ನಾಗರಾಜ್ ಭಟ್ ಧನ್ಯವಾದವಿತ್ತರು, ನಾಗೇಂದ್ರ ಬಳೆಗಾರ್ ಕಾರ್ಯಕ್ರಮ ನಿರೂಪಸಿದರು.