ಮರದ ಕೆಳಗೆ ಕುಳಿತಿರುವ ಹಳ್ಳಿ ವೈದ್ಯನಿಂದ ಕ್ಯಾಪ್ಟನ್ ಕೂಲ್ ಮೊಣಕಾಲು ನೋವಿಗೆ ಚಿಕಿತ್ಸೆ!! ಧೋನಿ ಸರಳತೆಗೆ ಮತ್ತೊಂದು ನಿದರ್ಶನ

ರಾಂಚಿ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ರಾಂಚಿಯಲ್ಲಿರುವ ತಮ್ಮ ಮನೆಯಲ್ಲಿ ಬಿಡುವಿನ ಸಮಯವನ್ನು ಆನಂದಿಸುತ್ತಿದ್ದಾರೆ. ರಾಂಚಿಯಲ್ಲಿ ಭಾರತದ ಮಾಜಿ ಕ್ರಿಕೆಟ್ ನಾಯಕ ತಮ್ಮ ಸ್ನೇಹಿತರು ಮತ್ತು ಕುಟುಂಬದವರನ್ನು ಭೇಟಿ ಮಾಡುತ್ತಿದ್ದಾರೆ. ರಾಂಚಿಯ ಕೆಲವು ಯುವ ಕ್ರಿಕೆಟಿಗರನ್ನು ಭೇಟಿ ಮಾಡಲು ಅವರು ಜೆಎಸ್‌ಸಿಎ ಕ್ರೀಡಾಂಗಣಕ್ಕೂ ಹೋಗಿದ್ದಾರೆ. ಇದೇ ವೇಳೆ ತಮ್ಮ ಮೊಣಕಾಲು ನೋವಿಗೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಆದರೆ ದೊಡ್ಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲ, ಬದಲಿಗೆ ಮರದ ಕೆಳಗೆ ಕುಳಿತು ರೋಗಿಗಳನ್ನು ನೋಡುವ ವೈದ್ಯ ಬಂಧನ್ ಸಿಂಗ್ ಖಾರ್ವಾರ್ ಬಳಿ ಹೋಗಿದ್ದಾರೆ!

ಕ್ಯಾಪ್ಟನ್ ಕೂಲ್ ಚಿಕಿತ್ಸೆಗಾಗಿ ದೇಸಿ ವೈದ್ಯರನ್ನು ಆಯ್ಕೆ ಮಾಡಿದ್ದಾರೆ ಎಂದು ಮಾಧ್ಯಮ ಸಂಸ್ಥೆ ಐ.ಎ.ಎನ್.ಎಸ್ ವರದಿ ಮಾಡಿದೆ. ರಾಂಚಿಯ ಹಳ್ಳಿಯೊಂದರ ವೈದ್ಯರ ಬಳಿ ಔಷಧಿಯನ್ನು ಪಡೆಯಲು ಧೋನಿ ಹೋಗುತ್ತಿದ್ದಾರೆ. ವೈದ್ಯರ ಪ್ರಕಾರ, ಔಷಧಿಯನ್ನು ಮನೆಗೆ ಕೊಂಡೊಯ್ಯಲಾಗುವುದಿಲ್ಲ, ಆದ್ದರಿಂದ ಧೋನಿ ಡೋಸ್ ಪಡೆಯಲು ಪ್ರತಿ ನಾಲ್ಕು ದಿನಗಳಿಗೊಮ್ಮೆ ತನ್ನ ಮನೆಯಿಂದ 70 ಕಿಮೀ ಪ್ರಯಾಣಿಸುತ್ತಿದ್ದಾರೆ.

ಧೋನಿಗಿಂತ ಮೊದಲು, ಈ ವೈದ್ಯ ಅವರ ಹೆತ್ತವರಿಗೂ ಚಿಕಿತ್ಸೆ ನೀಡಿದ್ದರು ಎನ್ನಲಾಗಿದೆ. ವರದಿಯ ಪ್ರಕಾರ, ವೈದ್ಯರು ಕಳೆದ 3 ದಶಕಗಳಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಮರದ ಕೆಳಗೆ ಟಾರ್ಪಾಲಿನ ಟೆಂಟ್‌ನಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ಕಳೆದ ಒಂದು ತಿಂಗಳಿನಿಂದ ಧೋನಿ ತಮ್ಮ ಮೊಣಕಾಲು ನೋವಿಗಾಗಿ ಔಷಧಿಗಳನ್ನು ಪಡೆಯಲು ಅವರಿದ್ದಲ್ಲಿಗೆ ಬರುತ್ತಿದ್ದಾರೆ. ಅವರು ಕುಳಿತುಕೊಳ್ಳುವ ಸ್ಥಳವು ಲಾಪುಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಕಟಿಂಗ್ಕೆಲಾದಲ್ಲಿದೆ.

ತಾನು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಚಿಕಿತ್ಸ್ಸೆ ನೀಡುತ್ತಿದ್ದೇನೆ ಎನ್ನುವುದು ಬಂಧನ್ ಸಿಂಗ್ ಗೆ ತಿಳಿದಿರಲಿಲ್ಲ. ಧೋನಿ ಬಳಿ ಬಂದು ಕೆಲವು ಮಕ್ಕಳು ಸೆಲ್ಫಿ ತೆಗೆದುಕೊಳ್ಳಲು ಶುರು ಮಾಡಿದ ಮೇಲೆ ಧೋನಿ ಯಾರೆಂಬುದು ಬಂಧನ್ ಸಿಂಗ್ ಗೆ ಗೊತ್ತಾಗಿದೆ ಎಂದು ವರದಿ ಹೇಳಿದೆ.

“ಧೋನಿ ಯಾವುದೇ ಆಡಂಬರವಿಲ್ಲದೆ ಸಾಮಾನ್ಯ ರೋಗಿಯಂತೆ ಬರುತ್ತಾರೆ, ಅವರಿಗೆ ಸೆಲೆಬ್ರಿಟಿ ಎಂಬ ಹೆಮ್ಮೆ ಇಲ್ಲ. ಆದರೆ, ಈಗ ಪ್ರತಿ ನಾಲ್ಕು ದಿನಕ್ಕೊಮ್ಮೆ ಬರುವ ಧೋನಿ ಅವರ ಆಗಮನದ ಸುದ್ದಿ ಇಲ್ಲಿಗೆ ಅವರ ಅಭಿಮಾನಿಗಳನ್ನು ಎಳೆತರುತ್ತದೆ. ಆದ್ದರಿಂದ ಈಗ ಔಷಧಿ ನೀಡುವಾಗ ಅವರು ತನ್ನ ಕಾರಿನಲ್ಲಿ ಕುಳಿತಿರುತ್ತಾರೆ” ಎಂದು ಬಂಧನ್ ಸಿಂಗ್ ಹೇಳಿದ್ದಾರೆ.

ಧೋನಿ ಒಬ್ಬ ಶ್ರೇಷ್ಠ ಕ್ರಿಕೆಟಿಗ ಮಾತ್ರವಲ್ಲ, ಒಬ್ಬ ಒಳ್ಳೆ ವ್ಯಕ್ತಿ ಎನ್ನುವ ಕಾರಣಕ್ಕೇ ದೇಶ ವಿದೇಶದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವುದು. ಧೋನಿಯ ಸರಳತೆಯೆ ಅವರನ್ನು ಅಭಿಮಾನಿಗಳ ಕಣ್ಮಣಿಯಾಗಿಸಿದೆ ಎನ್ನುವುದು ಸುಳ್ಳಲ್ಲ.