ಸಿದ್ದಾಪುರ: ಮೃತಪಟ್ಟ ಮಂಗನಲ್ಲಿ ಕೆಎಫ್ ಡಿ ವೈರಾಣು ಇರುವುದು ದೃಢ

ಉಡುಪಿ: ಕುಂದಾಪುರ ತಾಲ್ಲೂಕಿನ ಸಿದ್ದಾಪುರದಲ್ಲಿ ಮೃತಪಟ್ಟಿರುವ ಮಂಗನಲ್ಲಿ ಕೆಎಫ್ ಡಿ ವೈರಾಣು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ರೋಹಿಣಿ ತಿಳಿಸಿದ್ದಾರೆ
ಸಿದ್ದಾಪುರದ ಮೃತಪಟ್ಟ ಮಂಗ ಒಂದರ ರಕ್ತದ ಮಾದರಿಯನ್ನು ಪುಣೆಯ ಸಂಶೋಧನಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಈಗ ಆ ವರದಿ ಬಂದಿದ್ದು, ಮೃತ ಮಂಗನ ದೇಹದಲ್ಲಿ ಕೆಎಫ್ ಡಿ ವೈರಾಣು ಇರುವುದು ಖಚಿತಗೊಂಡಿದೆ. ಈ ನಿಟ್ಟಿನಲ್ಲಿ ಸಿದ್ದಾಪುರದ ಸುತ್ತಮುತ್ತಲ ಗ್ರಾಮದ ಜನರಿಗೆ ಮಂಗನ ಕಾಯಿಲೆ ಬಾರದಂತೆ ಮುಂಜಾಗೃತ ಕ್ರಮವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಹಾಗೆಯೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಮಂಗನ ಕಾಯಿಲೆ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.