ಪಂಚೆ ಉಟ್ಟು ಮುಂಡಾಸು ಕಟ್ಟಿ ಕಾಂತಾರ ವೀಕ್ಷಿಸಿದ ಎಂ.ಆರ್.ಪಿ.ಎಲ್ ಉದ್ಯೋಗಿಗಳು!

ಮಂಗಳೂರು: ತುಳುವ ನಾಡಿನ ಸೊಗಡನ್ನು ಹೊಂದಿರುವ ಕಾಂತಾರ ಸೃಷ್ಟಿಸಿದ ಸಂಚಲನ ಹೇಗಿದೆಯೆಂದರೆ ಇದೀಗ ವಿಶ್ವವೆ ತುಳುವ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿದೆ ಮಾತ್ರವಲ್ಲ, ಇಲ್ಲಿನ ಆಚಾರ ವಿಚಾರಗಳನ್ನು ತಿಳಿದುಕೊಳ್ಳುವತ್ತ ಮುಖ ಮಾಡಿದೆ. ಇದೀಗ ಎಂ.ಆರ್.ಪಿ.ಎಲ್ ನ ಉದ್ಯೋಗಿಗಳು ಪಂಚೆ ಉಟ್ಟುಕೊಂಡು ಎರಡನೇ ಬಾರಿಗೆ ಚಲನಚಿತ್ರ ವೀಕ್ಷಣೆಗೆ ಹೊರಟಿದ್ದು, ಇದು ಈ ಸಿನಿಮಾ ಮತ್ತು ಈ ಮಣ್ಣಿನ ಸಂಸ್ಕೃತಿಯ ಬಗ್ಗೆ ಈ ಯುವಕರಿಗಿರುವ ಅಭಿಮಾನವನ್ನು ಎತ್ತಿ ತೋರಿಸುತ್ತಿದೆ.

ಮೊದಲನೆ ಬಾರಿಗೆ ಕಾಂತಾರ ಚಲನಚಿತ್ರವನ್ನು ಕಂಡು ಖುಷಿಪಟ್ಟ ಈ ಯುವಕರ ತಂಡವು ಎರಡನೇ ಬಾರಿಗೆ ಪಂಚೆ ಉಟ್ಟುಕೊಂಡು, ತಲೆಗೆ ಮುಂಡಾಸು ಕಟ್ಟಿಕೊಂಡು ಥಿಯೇಟರಿನತ್ತ ಮುಖ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ರಾಜ್.ಬಿ.ಶೆಟ್ಟಿ ಮತ್ತು ಕಾಂತಾರ ಸಿನಿಮಾದ ಬಳಿಕ ರಿಷಭ್ ಶೆಟ್ಟಿ ಸಾರ್ವಜನಿಕ ವೇದಿಕೆಗಳಲ್ಲಿಯೂ ಪಂಚೆ ಉಟ್ಟುಕೊಂಡು ತಮ್ಮತನವನ್ನು ಮೆರೆಯುತ್ತಿರುವುದನ್ನು ಕಾಣಬಹುದು. ತುಳುನಾಡಿನ ಪಂಚೆ ಆಧಾರಿತ ಕನ್ನಡ ಚಲನಚಿತ್ರ ‘ಲುಂಗಿ’ ಬಗ್ಗೆ ಯೂ ಇಲ್ಲಿ ಜ್ಞಾಪಿಸಿಕೊಳ್ಳಬಹುದು.ಅಂತೂ ಯುವಕರು ತಮ್ಮ ಸಂಸ್ಕೃತಿಯ ಬಗ್ಗೆ ಒಲವು ಹೊಂದುವಂತೆ ಮಾಡುವಲ್ಲಿ ಕಾಂತಾರ ಸಫಲವಾಗಿದೆ.