ಎಂ.ಆರ್.ಎಫ್ ಘಟಕಗಳಿಂದ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ: ಎಸ್ ಅಂಗಾರ.

ಉಡುಪಿ: ಗ್ರಾಮ ಪಂಚಾಯತ್‌ಗಳು ಎದುರಿಸುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಗಳಿಗೆ ಎಂ.ಆರ್.ಎಫ್ ಘಟಕಗಳು ಸೂಕ್ತ ಪರಿಹಾರ ನೀಡಬಲ್ಲದು ಎಂದು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು.

ಅವರು ಬುಧವಾರ ಬಡಗಬೆಟ್ಟು ಗ್ರಾಮ ಪಂಚಾಯತ್‌ನ ನೇತಾಜಿ ನಗರ ಮಿನಿ ಎಂ.ಆರ್.ಎಫ್ ಕೇಂದ್ರದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಲೂಕು ಪಂಚಾಯತ್ ಉಡುಪಿ ಹಾಗೂ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣವಾದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕ, ಮಲತ್ಯಾಜ್ಯ ನಿರ್ವಹಣಾ ಘಟಕ, ಬೂದು ನೀರು ನಿರ್ವಹಣಾ ಕಾಮಗಾರಿ ಹಾಗೂ ಶಾಂತಿ ನಗರದಲ್ಲಿ ನಿರ್ಮಾಣವಾದ ಸುಸಜ್ಜಿತ ಮೀನು ಮಾರುಕಟ್ಟೆ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತಾನಾಡಿದರು.

ಇಚ್ಛಾಶಕ್ತಿ ಇದ್ದರೆ ಕಸವನ್ನು ಸಹ ಆದಾಯದ ಮೂಲವನ್ನಾಗಿ ಮಾಡಬಹುದು ಎಂಬುದಕ್ಕೆ ಎಂ.ಆರ್.ಎಫ್. ಘಟಕಗಳೇ ಸಾಕ್ಷಿಯಾಗಿದೆ. ಎಲ್ಲಾ ಪಂಚಾಯತ್‌ಗಳು ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಬೇಕು ಎಂದರು.

ಶಾಸಕ ಲಾಲಾಜಿ ಆರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಧವಿ ಎಸ್ ಆಚಾರ್ಯ, ಉಪಾಧ್ಯಕ್ಷೆ ನಿರುಪಮಾ ಹೆಗ್ಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್., ತರಬೇತಿ ನಿರತ ಐ.ಎ.ಎಸ್. ಅಧಿಕಾರಿ ಯತೀಶ್, ಜಿ.ಪಂ. ಯೋಜನಾ ನಿರ್ದೇಶಕ ಬಾಬು, ಕರಾವಳಿ ಅಭಿವೃದ್ಧಿ
ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ವಿಜಯ, ಪಿಡಿಓ ಅಶೋಕ್, ಮಟ್ಟಾರು ರತ್ನಾಕರ ಹೆಗ್ಡೆ, ಶ್ಯಾಮಲಾ ಕುಂದರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿದರು.