ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಸಂಸತ್ತಿನ ಹೊರಗೆ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರನ್ನು ಅನುಕರಣೆ ಮಾಡಿ ಅಣಕಿಸಿರುವುದನ್ನು ರಾಜ್ಯಸಭಾ ಅಧ್ಯಕ್ಷರಾಗಿರುವ ಜಗದೀಪ್ ಧಂಖರ್ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯ ಪ್ರತಿಪಕ್ಷಗಳ ಸಂಸದರನ್ನು ಸಾಮೂಹಿಕ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿರುವ ಪ್ರತಿಪಕ್ಷಗಳ ಸಂಸದರ ಮಧ್ಯೆ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಉಪರಾಷ್ಟ್ರಪತಿಗಳ ಅನುಕರಣೆ ಮಾಡಿ ಅಣಕಿಸುತ್ತಿದ್ದು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅದನ್ನು ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸುತ್ತಿರುವುದನ್ನು ಅವರು ಖಂಡಿಸಿದ್ದಾರೆ.
ಒಬ್ಬ ಸಂಸದ ಅಣವಾಡುತ್ತ ಅಪಹಾಸ್ಯ ಮಾಡುತ್ತಿರುವುದು ಮತ್ತು ಎರಡನೇ ಸಂಸದ ಅದನ್ನು ವಿಡಿಯೋ ಚಿತ್ರೀಕರಿಸುತ್ತಿರುವುದು ನಾಚಿಕೆಗೇಡಿನ, ಹಾಸ್ಯಾಸ್ಪದ, ಸ್ವೀಕಾರಾರ್ಹವಾಗಿಲ್ಲದ ವಿಷಯ ಎಂದು ಧಂಖರ್ ಹೇಳಿದ್ದಾರೆ.
#WATCH | TMC MP Kalyan Banerjee mimics Rajya Sabha Chairman Jagdeep Dhankhar in Parliament premises pic.twitter.com/naabLIzibY
— ANI (@ANI) December 19, 2023
ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಕೂಡ ಘಟನೆಯನ್ನು ಖಂಡಿಸಿದ್ದು, ಕಲ್ಯಾಣ್ ಬ್ಯಾನರ್ಜಿ ಅವರನ್ನು ಅಮಾನತುಗೊಳಿಸುವಂತೆ ಕರೆ ನೀಡಿದ್ದಾರೆ. ಸದನ ಮತ್ತು ಅಧ್ಯಕ್ಷರ ಅಧಿಕಾರ ಕಡೆಗಣಿಸಿರುವ ಸದಸ್ಯರನ್ನು (ಸಂಸದರನ್ನು) ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಡಿಸೆಂಬರ್ 13 ರಂದು ಸಂಸತ್ತಿನ ಭದ್ರತಾ ಉಲ್ಲಂಘನೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧಿಕೃತ ಹೇಳಿಕೆ ನೀಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದ್ದು ಪದೇ ಪದೇ ಸಂಸದ್ ಸದನವನ್ನು ಮುಂದೂಡಲಾಗುತ್ತಿತ್ತು. ಸಂಸದರ ಅನುಚಿತ ವರ್ತನೆ ಹಿನ್ನಲೆ ಅವರನ್ನು ಅಮಾನತುಗೊಳಿಸಲಾಗಿತ್ತು.
ವಿವಿಧ ವಿರೋಧ ಪಕ್ಷಗಳ 92 ಸಂಸದರನ್ನು ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಸಂಸದರು ನಿನ್ನೆಯಿಂದ ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಇನ್ನೂ 49 ಸಂಸದರನ್ನು ಅಮಾನತುಗೊಳಿಸಲಾಗಿದ್ದು, ಅಮಾನತುಗೊಂಡ ಅಂಕಿ ಅಂಶ ದಾಖಲೆಯ 141ಕ್ಕೆ ಏರಿದೆ.












