ಲಿಕ್ವಿಡ್ ನೈಟ್ರೋಜನ್ ಸಂಶೋಧನೆಗೆ ಸಹಕಾರ: ನಿಟ್ಟೆ ಹಾಗೂ ಇಲೈಟ್ ಇಂಡಸ್ಟ್ರೀಸ್ ನಡುವೆ ಒಪ್ಪಂದ

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಇಲೈಟ್ ಇಂಡಸ್ಟ್ರೀಸ್ ಗ್ರೂಪ್ ಆಫ್ ಕಂಪೆನೀಸ್, ದಮನ್ & ಡಿಯು ನ ನಡುವಿನ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಕುವ ಹಾಗೂ ಹಸ್ತಾಂತರ ಮಾಡುವ ಕಾರ್ಯಕ್ರಮವು ಜು.12 ರಂದು ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ನಡೆಯಿತು.

ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್.ಚಿಪ್ಳೂಣ್ಕರ್ ಹಾಗೂ ಇಲೈಟ್ ಇಂಡಸ್ಟ್ರೀಸ್ ಸಂಸ್ಥೆಯ ಸಿ.ಇ.ಒ ದಿನೇಶ್ ಶೆಟ್ಟಿ ಒಪ್ಪಂದದಕ್ಕೆ ಸಹಿ ಹಾಕಿದರು. ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ.ಉದಯ್, ಇಲೈಟ್ ಸಂಸ್ಥೆಯೊಂದಿಗಿನ ಯೋಜನೆಗಳ ಪ್ರಧಾನ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ಒಪ್ಪಂದದ ಪ್ರಕಾರ ಇಲೈಟ್ ಇಂಡಸ್ಟ್ರೀಸ್ ಗ್ರೂಪ್ ಆಫ್ ಕಂಪೆನೀಸ್ ಸಂಸ್ಥೆಯು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕರಿಗೆ ಲಿಕ್ವಿಡ್ ನೈಟ್ರೋಜನ್ ಬಗೆಗೆ ಸಂಶೋಧನೆ ನಡೆಸಲು ಸಹಕರಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ವಿವಿಧ ಪ್ರಾಜೆಕ್ಟ್, ತರಬೇತಿ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ಸಹಾಯ ಮಾಡಲಿದೆ.

ಈ ಸಂದರ್ಭದಲ್ಲಿ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ. ಶ್ರೀನಿವಾಸ ರಾವ್ ಬಿ.ಆರ್, ಕ್ಯಾಂಪಸ್ ಮೈಂಟೆನೆನ್ಸ್ & ಡೆವಲ್ಮೆಂಟ್ ನ ನಿರ್ದೇಶಕ ಯೋಗೀಶ್ ಹೆಗ್ಡೆ, ಡೀನ್ ಡಾ.ಸುದೇಶ್ ಬೇಕಲ್, ಡಾ.ನರಸಿಂಹ ಬೈಲ್ಕೇರಿ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಪೈ, ವಿಭಾಗದ ಸಹಪ್ರಾಧ್ಯಾಪಕರು ಹಾಗೂ ಇಲೈಟ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಪೈ ಸ್ವಾಗತಿಸಿದರು. ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ. ನಿತಿನ್ ಶೆಟ್ಟಿ ನಿರೂಪಿಸಿದರು.