ಉಡುಪಿ: ಕರಾವಳಿ ಕ್ರೈಸ್ತ ಬಾಂಧವರ ಅತ್ಯಂತ ಶ್ರದ್ಧೆಯ ಹಬ್ಬ ತೆನಹಬ್ಬ ಹಾಗೂ ಕನ್ಯಾಮರಿಯಮ್ಮನವರ ಜನ್ಮದಿನ (ಮೊಂತಿ ಫೆಸ್ಟ್) ವನ್ನು ಕೊರೊನಾ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸರಳ ರೀತಿಯಲ್ಲಿ ಮಂಗಳವಾರ ಆಚರಿಸಲಾಯಿತು.
ಜಿಲ್ಲೆಯ ಎಲ್ಲ ಚರ್ಚ್ ಗಳಲ್ಲಿ ಧರ್ಮಗುರುಗಳು ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಯನ್ನು ಆಶಿರ್ವಾದಿಸಿ ಬಲಿಪೂಜೆಗಳನ್ನು ನೆರವೇರಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಜೆರಾಲ್ಡ್ ಐಸಾಕ್ ಲೋಬೊ ಉಡುಪಿ ಶೋಕ ಮಾತಾ ಇಗರ್ಜಿಯಲ್ಲಿ ಹೊಸ ತೆನೆಗಳನ್ನು ಆಶೀರ್ವಾದಿಸಿ ಬಲಿಪೂಜೆಯನ್ನು ನೆರವೇರಿಸಿ ಸರ್ವ ಜನರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.
ಪ್ರತಿ ವರ್ಷ ವಾಡಿಕೆಯಂತೆ ಹಬ್ಬದ 9 ದಿನ ಮುಂಚಿತವಾಗಿ ಅಂದರೆ ಅಗಸ್ಟ್ 30ರಿಂದ ಚರ್ಚ್ ಗಳಲ್ಲಿ ವಿಶೇಷವಾಗಿ ನೊವೇನಾ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಮೊಂತಿ ಹಬ್ಬದ ಆಚರಣೆಗೆ ನಾಂದಿಯಾಗುತ್ತದೆ. ಆದರೆ ಈ ಬಾರಿ 9 ದಿನಗಳ ನೊವೆನಾವನ್ನು ಕೇವಲ ಸಾಂಕೇತಿಕವಾಗಿ ನೆರವೇರಿಸಿದ್ದು, ಮಕ್ಕಳ ತಮ್ಮ ಮನೆಗಳಲ್ಲಿಯೇ ಕುಟುಂಬದೊಡನೆ ಸೇರಿ ಮೇರಿ ಮಾತೆಗೆ ಹೂಗಳನ್ನು ಸಮರ್ಪಿಸಲು ಸೂಚಿಸಲಾಗಿತ್ತು.
ಇಗರ್ಜಿಯಿಂದ ಭಕ್ತಿಯಿಂದ ಕೊಂಡು ಬಂದ ಭತ್ತದ ತೆನೆಯನ್ನು ಕುಟುಂಬದ ಹಿರಿಯರು ಮನೆಗೆ ತಂದು ದೇವರ ಪೀಠದ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿ, ಹೊಸ ಭತ್ತದ ತೆನೆಗಳನ್ನು ಸುಲಿದು ಕುಟುಂಬದ ಸದಸ್ಯರೊಂದಿಗೆ ಪಾಯಸ ಅಥವಾ ಹಾಲಿನೊಂದಿಗೆ ಸವಿದರು.