ಕುಂದಾಪುರ: ಮದರ್ ತೆರೆಸಾ ಶಾಲೆ ಶಂಕರನಾರಾಯಣದಲ್ಲಿ ಹೈಸ್ಕೂಲ್ ವಿಭಾಗದ ವಾರ್ಷಿಕ ಬಹುಮಾನ ವಿತರಣೆ ಕಾರ್ಯಕ್ರಮದ ಅಂಗವಾಗಿ ‘ಅಭ್ಯುದಯ – 2025’ ವೈವಿಧ್ಯಮಯ ಕಾರ್ಯಕ್ರಮವನ್ನು ಡಿಸೆಂಬರ್ 20 ರಂದು ಹಮ್ಮಿಕೊಳ್ಳಲಾಯಿತು.
ಉಡುಪಿ ಜಿಲ್ಲಾ ಮಾಜಿ ವಿದ್ಯಾಂಗ ಉಪ ನಿರ್ದೇಶಕರಾದ ದಿವಾಕರ ಶೆಟ್ಟಿ ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆಯ ಖ್ಯಾತ ಹಿರಿಯ ಪತ್ರಕರ್ತರಾದ ಜಾನ್ ಡಿಸೋಜ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಸಂಸ್ಥೆಯ ಸಂಸ್ಥಾಪಕರಾದ ಕುಮಾರಿ ಶಮಿತಾ ರಾವ್ ಹಾಗೂ ಕುಮಾರಿ ರೆನಿಟಾ ಲೋಬೋ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಮಮತಾ ಪೂಜಾರಿ, ಉಪಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್ ಶೆಟ್ಟಿ, ವಿದ್ಯಾರ್ಥಿ ನಾಯಕ ಪ್ರೀತಮ್ ಜಿ, ವಿದ್ಯಾರ್ಥಿ ನಾಯಕಿ ಮಾನ್ವಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆ ಮತ್ತು ಸ್ವಾಗತ ನೃತ್ಯದ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ನಂತರ ವೇದಿಕೆ ಮೇಲಿನ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ವಿದ್ಯಾರ್ಥಿ ಪರಿಷತ್ ಸದಸ್ಯರು ಸಾಂಸ್ಕೃತಿಕ ಮತ್ತು ಕ್ರೀಡಾ ವರದಿಯನ್ನು ವಾಚಿಸಿದರು. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಹೈಸ್ಕೂಲ್ ವಿಭಾಗದ ಕ್ರೀಡೆ, ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿ ಪ್ರೀತಮ್ ಜಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ದಿವಾಕರ ಶೆಟ್ಟಿ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಶಾಲಾ ದಿನಗಳಲ್ಲಿ ಶಿಸ್ತು ಬದ್ಧ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಉತ್ತಮ ಗುರಿಯನ್ನು ಇರಿಸಿಕೊಂಡು ಶ್ರದ್ಧೆಯಿಂದ ಅಧ್ಯಯನ ಮಾಡಿ ಬದುಕಿನಲ್ಲಿ ಪ್ರಗತಿ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಪತ್ರಕರ್ತ ಜಾನ್ ಡಿಸೋಜ ಅವರು ಮಾತನಾಡಿ ಒಂದು ಮಗು ಪಠ್ಯದ ಶಿಕ್ಷಣವನ್ನಷ್ಟೇ ಪಡೆದರೆ ಶಿಕ್ಷಣ ಅಪೂರ್ಣವೆನಿಸುತ್ತದೆ ಅದರ ಜೊತೆಗೆ ಜೀವನ ಮೌಲ್ಯಗಳು ಅಳವಡಿಸಿಕೊಳ್ಳುವುದು ಕೂಡಾ ಅತ್ಯವಶ್ಯಕ. ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ ಏಕೆಂದರೆ ಇಲ್ಲಿ ಕೇವಲ ಪುಸ್ತಕಾಧಾರಿತ ಶಿಕ್ಷಣವಷ್ಟೇ ಅಲ್ಲದೆ ಮೌಲ್ಯಾಧಾರಿತ ಶಿಕ್ಷಣಕ್ಕೂ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕವಾಗುವ ವಿವಿಧ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಮಹತ್ವ ನೀಡಲಾಗುತ್ತಿದೆ ಎಂದು ಹೇಳುತ್ತಾ ತಮ್ಮಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಬದುಕಿನಲ್ಲಿ ಶಾಲಾ ಶಿಕ್ಷಕರ ಹಾಗೂ ಪೋಷಕರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದ ಮಹತ್ವದ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಸತತ ಪ್ರಯತ್ನದಿಂದ ತಮ್ಮ ಬದುಕಿನಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದು ತಿಳಿ ಹೇಳಿದರು.
ಸಂಸ್ಥೆಯ ಸಂಸ್ಥಾಪಕರಾದ ಕುಮಾರಿ ಶಮಿತಾ ರಾವ್ ಅವರು ಮಾತನಾಡಿ ಮುಂದಿನ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಹತ್ತನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿ ಮದರ್ ತೆರೇಸಾ ಪದವಿ ಪೂರ್ವ ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ನೀಡುವ ಸಹಾಯ ಹಸ್ತದ ಬಗ್ಗೆ ಮಾಹಿತಿ ನೀಡಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಪೋಷಕರ ಮನ ಸೆಳೆದವು. ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಭಾಗವಹಿಸಿ ಅಭ್ಯುದಯ – 2025 ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
















