ಭಾರತ-ಚೀನಾ ಗಡಿಯ ಉಮ್ಲಿಂಗ್ಲಾ ಪಾಸ್​ಗೆ ಬೈಕ್ ಯಾತ್ರೆ ಕೈಗೊಂಡ ಕುಂದಾಪುರ ಮೂಲದ ತಾಯಿ-ಮಗಳು

ಉಡುಪಿ: ಕುಂದಾಪುರ ಮೂಲದ 55ರ ಹರೆಯದ ವಿಲ್ಮಾ ಕ್ರಾಸ್ತಾ ಕರ್ವಾಲೋ ಇವರು ತಮ್ಮ ಮಗಳು ಚೆರಿಶ್​ ಕರ್ವಾಲೋ ಸಮುದ್ರಮಟ್ಟಕ್ಕಿಂತ ಸುಮಾರು 19,024 ಅಡಿ ಎತ್ತರದಲ್ಲಿರುವ, ಭಾರತ-ಚೀನಾ ಗಡಿಗೆ ತಾಗಿಕೊಂಡಿರುವ ಜಗತ್ತಿನ ಅತಿ ಎತ್ತರದ ಪ್ರದೇಶ ಉಮ್ಲಿಂಗ್ಲಾ ಪಾಸ್​ಗೆ ಬೈಕ್ ಯಾತ್ರೆ ಕೈಗೊಂಡಿದ್ದು ಇತಿಹಾಸ ರಚಿಸಿದ್ದಾರೆ. ಒಟ್ಟು 900 ಕಿ.ಮೀ. ಪಯಣವನ್ನು ಕೇವಲ 5 ದಿನಗಳಲ್ಲಿ ಪೂರೈಸಿದ್ದಾರೆ.

ವಿಲ್ಮಾ ಈ ಹಿಂದೆ ಜಗತ್ತಿನ ಎರಡನೇ ಎತ್ತರದ ಪ್ರದೇಶ ಖದುಂರ್ಗ್ಲಾ ಪಾಸ್​ಗೆ ಬೈಕ್​ ಮೂಲಕ ಹೋಗಿ ಸುದ್ದಿ ಮಾಡಿದ್ದರು.

ಲಡಾಕ್​ ಪ್ರಾಂತ್ಯದ ಉಮ್ಲಿಂಗ್ಲಾ ಪಾಸ್​ ಬೆಟ್ಟಗುಡ್ಡಗಳಿಂದ ತುಂಬಿದ್ದು ಸಾಹಸಿ ರೈಡರ್​ ಗಳಿಗೆ ಮಾತ್ರ ಇಲ್ಲಿಗೆ ತಲುಪಲು ಸಾಧ್ಯ. ದುರ್ಗಮ ಲಡಾಕ್ ನಂತಹ ಎತ್ತರದ ಪ್ರದೇಶಕ್ಕೆ ವಿಲ್ಮಾ ಮೂರನೇ ಬಾರಿ ಬೈಕ್​ ರೈಡ್​ ಮಾಡಿದ್ದಾರೆ.

ವೃತ್ತಿಯಲ್ಲಿ ಕಾರ್ಪೊರೇಟರ್​ ಟ್ರೈನರ್ ಆಗಿರುವ ಇವರು ಕುಟುಂಬದ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರ ಬೈಕ್ ಸಾಹಸಕ್ಕೆ ಮಗಳು ಚೆರಿಶ್ ಕೂಡಾ ಜೊತೆಯಾಗಿದ್ದಾಳೆ.