ಗ್ರಾಪಂ ಚುನಾವಣೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ: ಕೊಡವೂರು

ಉಡುಪಿ: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ. ಆ ಮೂಲಕ ಪಕ್ಷದ ಈ ಹಿಂದಿನ ಇತಿಹಾಸವನ್ನು ಮರುಕಳಿಸಲು ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ತೊಡಗಿಸಿಕೊಳ್ಳಬೇಕು ಎಂದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಕಾರ್ಯಕರ್ತರಿಗೆ ಕರೆ ನೀಡಿದರು.

ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವ ತಯಾರಿಗಾಗಿ ಜಿಲ್ಲಾ ಕಾಂಗ್ರಸ್ ಭವನದಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರೊಂದಿಗೆ ಸ್ಪಂದಿಸುವ ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಗ್ರಾಮ ಪಂಚಾಯತ್ ಚುನಾವಣೆ ತಳಮಟ್ಟದಲ್ಲಿ ಪಕ್ಷವನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದರು.

ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ ದ ಆಶಯಗಳನ್ನು ಸಾಕಾರಗೊಳಿಸುವಲ್ಲಿ ಗ್ರಾಮ ಪಂಚಾಯತ್‍ಗಳು ಪ್ರಧಾನ ಭೂಮಿಕೆ ವಹಿಸುತ್ತವೆ. ಈ ನಿಟ್ಟಿನಲ್ಲಿ ಗರಿಷ್ಟ ಸ್ಥಾನಗಳನ್ನು ಗೆಲ್ಲುವುದು ಪಕ್ಷದ ಗುರಿಯಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ವ್ಯಾಪ್ತಿಗೆ ಬರುವ 5 ಬ್ಲಾಕ್‍ಗಳಿಗೆ ಜಿಲ್ಲಾ ಕಾಂಗ್ರೆಸ್‍ನಿಂದ ಬ್ಲಾಕ್‍ಗಳಿಗೆ 3 ಜನರಂತೆ ಉಸ್ತುವಾರಿಗಳನ್ನು ನೇಮಕ ಮಾಡಲಾಗುವುದು. ಅವರು ಬ್ಲಾಕ್‍ನಿಂದ ನಿಯುಕ್ತಿಗೊಂಡ ಉಸ್ತುವಾರಿಗಳೊಂದಿಗೆ ಕೂಡಿಕೊಂಡು ಅಭ್ಯರ್ಥಿಯ ಆಯ್ಕೆ, ಸಮಸ್ಯೆಗಳ ಪರಿಹಾರ ಹಾಗೂ ಸ್ಥಳೀಯವಾಗಿ ಚುನಾವಣಾ ಪ್ರಚಾರದ ರಣನೀತಿ ರೂಪಿಸಿಕೊಳ್ಳಬೇಕಾಗಿದೆ ಎಂದರು.

ಸಭೆಯಲ್ಲಿ ದಿನೇಶ್ ಪುತ್ರನ್, ವೆರೋನಿಕಾ ಕರ್ನೇಲಿಯೋ, ಬಿ. ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ನೀರೆ ಕೃಷ್ಣ ಶೆಟ್ಟಿ, ಹರೀಶ್ ಕಿಣಿ, ಮುರಳಿ ಶೆಟ್ಟಿ, ಜ್ಯೋತಿ ಹೆಬ್ಬಾರ್, ಅಣ್ಣಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ಹಬೀಬ್ ಅಲಿ, ವಿಶ್ವಾಸ್ ಅಮೀನ್, ಸತೀಶ್ ಅಮೀನ್ ಪಡುಕೆರೆ, ಹರೀಶ್ ಶೆಟ್ಟಿ ಪಾಂಗಾಳ, ಡಾ. ಸುನೀತಾ ಶೆಟ್ಟಿ, ರೋಶನಿ ಒಲಿವರ್, ಉಪೇಂದ್ರ ಮೆಂಡನ್, ಲಕ್ಷಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬಿ. ಕುಶಲ್ ಶೆಟ್ಟಿ ಸ್ವಾಗತಿಸಿ, ವಕ್ತಾರ ಭಾಸ್ಕರ್ ರಾವ್ ಕಿದಿಯೂರು ವಂದಿಸಿದರು.