₹1.79 ಕೋಟಿಗೂ ಹೆಚ್ಚ ಹಣ ಸಂಗ್ರಹ : ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ತೆರೆ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಇಂದು ಸರ್ಕಾರಿ ರಜೆ ಇದ್ದುದರಿಂದ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಗಾಜಿನ ಮನೆಯ ಹೊರಾಂಗಣದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ, ಭದ್ರತಾ ಸಿಬ್ಬಂದಿ, ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು. ಭಾನುವಾರ ಒಂದೇ ದಿನ 1.25 ಲಕ್ಷ ಮಂದಿ ಆಗಮಿಸಿದ್ದು, ಪ್ರವೇಶ ಶುಲ್ಕದ ರೂಪದಲ್ಲಿ ಒಟ್ಟಾರೆ 80.50 ಲಕ್ಷ ರೂ. ಸಂಗ್ರಹವಾಗಿದೆ. ಪ್ರವೇಶ ದ್ವಾರಗಳಲ್ಲಿ ಒಳಗೂ, ಹೊರಗೂ ಭಾರಿ ಜನಸಂದಣಿ ಕಂಡುಬಂದಿತ್ತು. ಈ ರಸ್ತೆ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್‌ಗಳು, ಮೆಟ್ರೋ ರೈಲುಗಳಲ್ಲೂ ಪ್ರಯಾಣಿಕರ ಸಂಖ್ಯೆಯೂ ದುಪ್ಪಟ್ಟಾಗಿತ್ತು. ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾದ ಲಾಲ್‌ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಇಂದು ಅದ್ಧೂರಿ ತೆರೆಬಿದ್ದಿದ್ದು, ಕೊನೆಯ ದಿನವಾದ ಇಂದು (ಮಂಗಳವಾರ) ಪ್ರದರ್ಶನ ವೀಕ್ಷಿಸಲು ಸಸ್ಯಕಾಶಿಗೆ ಜನಸಾಗರವೇ ಹರಿದುಬಂದಿತ್ತು.

ಆಗಸ್ಟ್ 4ರಿಂದ 15ರವರೆಗೆ ಒಟ್ಟಾರೆ 5 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದು, 1.79 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹವಾಗಿದೆ. ಸ್ವಾತಂತ್ರ್ಯೋತ್ಸವದ ದಿನವಾದ ಇಂದು ಜನಜಂಗುಳಿ ನೆರೆದಿತ್ತು. ರಜಾ ದಿನಗಳಲ್ಲಿ ಹೆಚ್ಚು ವೀಕ್ಷಕರು ಆಗಮಿಸಿದ್ದಾರೆ. ಪ್ರವೇಶ ಶುಲ್ಕ 80 ರೂ ಇದ್ದುದರಿಂದ ಈ ಬಾರಿ ಹೆಚ್ಚು ಹಣ ಸಂಗ್ರಹವಾಗಿದೆ. ವಿವಿಧ ಹೂಗಳಿಂದ ರಚಿಸಿದ ವಿಧಾನಸೌಧದ 18 ಅಡಿ ಎತ್ತರದ ಪ್ರತಿಕೃತಿ, 14 ಅಡಿಯ ಕೆಂಗಲ್ ಹನುಮಂತಯ್ಯನವರ ವಿಗ್ರಹ ಫಲಪುಷ್ಪ ಪ್ರದರ್ಶನದ ವಿಶೇಷತೆಯಾಗಿತ್ತು.

ಮುಂಜಾನೆ ಬೆಳಗ್ಗೆ 7 ಗಂಟೆಯಿಂದಲೇ ಪ್ರದರ್ಶನ ತೆರೆಯಲಾಗಿತ್ತು. ವಾಹನ ಮತ್ತು ಜನ ಸಂಚಾರದಿಂದ ಲಾಲ್‌ಬಾಗ್ ಸುತ್ತಮುತ್ತಲಿನ ರಸ್ತೆಗಳಾದ ಸಿದ್ದಾಪುರ, ಅಶೋಕ ಪಿಲ್ಲರ್, ಆರ್.ವಿ. ರಸ್ತೆ, ಹೊಸೂರು ರಸ್ತೆ, ಸೌತ್‌ ಎಂಡ್ ಸೇರಿದಂತೆ ನಾನಾ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಹರಸಾಹಸಪಟ್ಟು ಸಂಚಾರ ದಟ್ಟನೆ ನಿರ್ವಹಿಸಿದ್ದರು.