ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ವಿವಿಧ ಸಂಸ್ಥೆಗಳಲ್ಲಿ 1.14 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಇದರಲ್ಲಿ ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ದೆಹಲಿ ಪೊಲೀಸ್ ಸೇರಿದಂತೆ ವಿವಿಧ ಪಡೆಗಳಲ್ಲಿ ಖಾಲಿ ಹುದ್ದೆಗಳು ಇವೆ ಎಂದು ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.ಸಿಆರ್‌ಪಿಎಫ್, ಬಿಎಸ್‌ಎಫ್ ಸೇರಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವ ವಿವಿಧ ಸಂಸ್ಥೆಗಳಲ್ಲಿ 1,14,245 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಮಾಹಿತಿ ನೀಡಿದ್ದಾರೆ.
ಖಾಲಿ ಇರುವ ಹುದ್ದೆಗಳ ಪೈಕಿ ‘ಎ’ ಗುಂಪಿನ 3,075 ಹುದ್ದೆಗಳು, ‘ಬಿ’ ಗುಂಪಿನ 15,861 ಹುದ್ದೆಗಳು ಮತ್ತು ‘ಸಿ’ ಗುಂಪಿನ 95,309 ಹುದ್ದೆಗಳು ಸೇರಿವೆ. ಪ್ರಸ್ತುತ 2023ರಲ್ಲಿ ಸುಮಾರು 31,879 ಹುದ್ದೆಗಳಿಗೆ ಭರ್ತಿಗೆ ಜಾಹೀರಾತುಗಳನ್ನು ಪ್ರಕಟಿಸಲಾಗಿದೆ. ಇವುಗಳ ಪೈಕಿ ಈಗಾಗಲೇ 1,126 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಸಚಿವ ಅಜಯ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವರಾದ ಅಜಯ್ ಕುಮಾರ್ ಮಿಶ್ರಾ, ಕೇಂದ್ರ ಗೃಹ ಇಲಾಖೆಯ ಅಧೀನದಲ್ಲಿ ಖಾಲಿ ಹುದ್ದೆಗಳ ಕುರಿತ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ. ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಅದರ ಅಡಿಗಳಲ್ಲಿ ಬರುವ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಾದ ಗಡಿ ಭದ್ರತಾ ಪಡೆ, ಸಶಸ್ತ್ರ ಸೀಮಾ ಬಾಲ್, ಕೇಂದ್ರ ಮೀಸಲು ಪೊಲೀಸ್ ಪಡೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್, ಅಸ್ಸೋಂ ರೈಫಲ್ಸ್ ಮತ್ತು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಮತ್ತು ದೆಹಲಿ ಪೊಲೀಸ್ ಸೇರಿದಂತೆ ಕೇಂದ್ರ ಪೊಲೀಸ್ ಸಂಸ್ಥೆಗಳಲ್ಲಿ ಪ್ರಸ್ತುತ ಸುಮಾರು 1,14,245 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದ್ದಾರೆ.
ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಜಾಹೀರಾತುಗಳ ನೀಡುವುದು ಮತ್ತು ನೇಮಕಾತಿ ಪ್ರಕ್ರಿಯೆ ಮುಗಿದ ನಂತರ ನೇಮಕಾತಿ ಪತ್ರಗಳನ್ನು ನೀಡಲಾಗುತ್ತದೆ. ಖಾಲಿ ಇರುವುದನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ನೇಮಕಾತಿ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುತ್ತದೆ. ಕಾಲಮಿತಿಯೊಳಗೆ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಸಚಿವ ಮಿಶ್ರಾ ತಿಳಿಸಿದ್ದಾರೆ.ಖಾಲಿ ಹುದ್ದೆಗಳಲ್ಲಿ ಮೀಸಲಾತಿವಾರು ಸಹ ಮಾಹಿತಿ ನೀಡಿದ್ದು, ಪರಿಶಿಷ್ಟ ಜಾತಿಯ 16,356 ಹುದ್ದೆಗಳು, ಪರಿಶಿಷ್ಟ ಪಂಗಡದ 8,759 ಹುದ್ದೆಗಳು, ಇತರ ಹಿಂದುಳಿದ ವರ್ಗದ 21,974 ಹುದ್ದೆಗಳು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ 7,394 ಹುದ್ದೆಗಳು ಮತ್ತು ಸಾಮಾನ್ಯ ವರ್ಗಕ್ಕೆ 59,762 ಹುದ್ದೆಗಳು ಸೇರಿವೆ. ಖಾಲಿ ಹುದ್ದೆಗಳ ನೇಮಕಾತಿ ನಿರಂತರ ಪ್ರಕ್ರಿಯೆಯಾಗಿದೆ ಎಂದು ಹೇಳಿದ್ದಾರೆ. ‘