ಚಾರ್ಲಿ 777: ಚಿತ್ರ ಬಿಡುಗಡೆಗೂ ಮುನ್ನವೆ ಕರ್ನಾಟಕದಾದ್ಯಂತ 100ಕ್ಕೂ ಅಧಿಕ ಪ್ರೀಮಿಯರ್‌ ಶೋ!

ಬೆಂಗಳೂರು: ಚಿತ್ರದ ಟ್ರೈಲರ್ ನಿಂದಲೆ ಸಿನಿ ರಸಿಕರ ಮನ ಸೂರೆಗೊಂಡಿದ್ದ ಚಾರ್ಲಿ 777 ಚಿತ್ರವು ಜೂನ್ 10 ರಂದು ರಾಷ್ಟ್ರಾದ್ಯಂತ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದ್ದು, ಅದಕ್ಕೂ ಮುನ್ನ ದೇಶದ ಹಲವೆಡೆ ಪ್ರೀಮಿಯರ್ ಶೋಗಳನ್ನು ಏರ್ಪಡಿಸಲಾಗಿತ್ತು. ದೆಹಲಿ, ಪಂಜಾಬ್, ಗುಜರಾತ್, ಕೊಲ್ಕತ್ತಾ ಸೇರಿದಂತೆ ಬಹುತೇಕ ಕಡೆಗಳಲ್ಲಿ ಪ್ರೀಮಿಯರ್ ಶೋಗಳನ್ನು ಏರ್ಪಡಿಸಿದ್ದು, ಚಲನಚಿತ್ರ ನೋಡಿದವರೆಲ್ಲಾ ಚಾರ್ಲಿಗೆ ಥಮ್ಸ್ ಅಪ್ ಎಂದಿದ್ದಾರೆ.

ಇದೀಗ ಕರ್ನಾಟಕದಲ್ಲಿ ಜೂನ್ 9 ರಂದು ನೂರು ಕಡೆಗಳಲ್ಲಿ ಪ್ರೋಮಿಯರ್ ಶೋಗೆ ಏರ್ಪಾಟು ಮಾಡಲಾಗಿದ್ದು ಬೆಂಗಳೂರಿನಲ್ಲಿ 55 ಶೋಗಳು, ಮಿಕ್ಕಂತೆ ಉಳಿದೆಲ್ಲಾ ಕಡೆ ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಅದಾಗಲೇ ಚಾರ್ಲಿ 777 ಚಲನಚಿತ್ರದ ಟಿಕೆಟ್ ಗಳು ಮುಂಗಡವಾಗಿ ಬುಕಿಂಗ್ ಮಾಡಲ್ಪಟ್ಟಿದ್ದು, ಕರ್ನಾಟಕದ ಜನತೆ ಚಿತ್ರ ಬಿಡುಗಡೆಗಾಗಿ ಬಹು ಕಾತರದಿಂದ ಕಾಯುತ್ತಿದ್ದಾರೆ.

ಸೋಮವಾರ ಚಿತ್ರದ ಸೆಲೆಬ್ರಿಟಿ ಪ್ರದರ್ಶನ ನಡೆದಿದ್ದು, ನಟಿ ರಮ್ಯ, ನಿರ್ದೇಶಕ ಸಂತೋಷ್‌ ಆನಂದರಾಮ್‌ ಸೇರಿದಂತೆ ನೂರಾರು ಸೆಲೆಬ್ರಿಟಿಗಳು ಈಗಾಗಲೇ ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ. ಚಾರ್ಲಿ ಕರ್ನಾಟಕದಲ್ಲಿ 300 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣುತ್ತಿದೆ.