ಚಿಕ್ಕಬಳ್ಳಾಪುರದಲ್ಲಿ ಅನ್ಯಸಮುದಾಯದವರಿಂದ ನೈತಿಕ ಪೊಲೀಸ್ ಗಿರಿ

ಚಿಕ್ಕಬಳ್ಳಾಪುರ: ನಗರದಲ್ಲಿ ಅನ್ಯಸಮುದಾಯದ ಯುವತಿಯೊಬ್ಬಳು ಹಿಂದೂ ಯುವಕನ ಜೊತೆಗೆ ಹೋಟೆಲ್ ಗೆ ಆಗಮಿಸಿದ ಹಿನ್ನೆಲೆಯಲ್ಲಿ ಆಕೆಯ ಸಮುದಾಯದ ಯುವಕರು ಇಬ್ಬರಿಗೂ ಕಿರುಕುಳ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆ ಚಿಕ್ಕಬಳ್ಳಾಪುರದ ಗೋಪಿಕಾ ಚಾಟ್ಸ್ ಬಳಿ ನಡೆದಿದೆ ಎನ್ನಲಾಗಿದೆ. ಈಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುರುವಾರ ಸಂಜೆ ಈ ಘಟನೆ ಚಿಕ್ಕಬಳ್ಳಾಪುರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಹಿಂದೂ ಯುವಕನ ಜೊತೆ ತಮ್ಮ ಸಮುದಾಯದ ಯುವತಿ ಆಗಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯುವಕರು ಇಬ್ಬರಿಗೂ ಕಿರುಕುಳ ನೀಡಿದ್ದಾರೆ ಎಂದು ವರದಿಯಾಗಿದೆ. ಯುವತಿಯು ಅವರನ್ನು ಎದುರಿಸಿದ್ದಲ್ಲದೆ ಪೊಲೀಸರನ್ನೂ ಸಂಪರ್ಕಿಸಿದರು. ಆದರೆ ನಂತರ ಆಕೆಯ ಕುಟುಂಬದವರು ಕ್ಷಮೆಯಾಚಿಸಲು ಒತ್ತಾಯಿಸಿದರು ಎನ್ನಲಾಗಿದೆ.

ದೇಶಾದ್ಯಂತ ಈ ರೀತಿಯ ನೈತಿಕ ಪೊಲೀಸ್ ಗಿರಿ ನಡೆಯುತ್ತಿರುವ ವಿಡೀಯೋಗಳು ಎಲ್ಲೆಡೆ ಕಂಡುಬರುತ್ತಿವೆ. ಇತ್ತೀಚೆಗೆ ಉತ್ತರಪ್ರದೇಶ, ಬಿಹಾರ ಮುಂತಾದೆಡೆ ಇಂತಹ ಪ್ರಸಂಗಗಳು ಕಂಡು ಬಂದಿದ್ದು, ನಾಲ್ಕು ಪ್ರಕರಣಗಳಲ್ಲಿ ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಾಗಿದೆ. ಇದೀಗ ಕರ್ನಾಟಕದಲ್ಲಿ ಮೊದಲನೆ ಇಂತಹ ಪ್ರಕರಣ ವರದಿಯಾಗಿದೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ನೈತಿಕ ಪೊಲೀಸ್ ಗಿರಿ ವಿರುದ್ದ ಕಾನೂನು ಕ್ರಮದ ಎಚ್ಚರಿಕೆಯನ್ನು ಸಿಎಂ ಸಿದ್ದರಾಮಯ್ಯನವರು ನೀಡಿದ್ದರು. ಇದೀಗ ಚಿಕ್ಕಬಳ್ಳಾಪುರದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿರುವ ಬಗ್ಗೆ ವರದಿಯಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.