ಕುಂದಾಪುರ: ಸಾಕಷ್ಟು ವರ್ಷಗಳ ಹಿಂದೆ ಭಾರತೀಯ ವೈದ್ಯಕೀಯ ಪದ್ದತಿಯಲ್ಲಿ ಆಯುರ್ವೇದ ಹಾಗೂ ಪ್ರಾಕೃತಿಕ ಚಿಕಿತ್ಸೆ ಎಂದರೆ ಮೂಗು ಮುರಿಯುತ್ತಿದ್ದವರೆ ಹೆಚ್ಚು. ಆದರೆ ಇಂದು ವಿಶ್ವದಲ್ಲೇ ಆಯುರ್ವೇದ ಹಾಗೂ ಪ್ರಕೃತಿ ಚಿಕಿತ್ಸೆಗೆ ಗೌರವ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿಯವರು ಯೋಗವನ್ನು ವಿಶ್ವಾದ್ಯಂತ ಪ್ರಚಾರ ಮಾಡಿ ಯೋಗಕ್ಕೆ ಇನ್ನಷ್ಟು ಗೌರವವನ್ನು ತಂದುಕೊಟ್ಟಿದ್ದಾರೆ ಎಂದು ಪರಮಪೂಜ್ಯ ಪದ್ಮವಿಭೂಷಣ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶನಿವಾರ ಇಲ್ಲಿನ ಮೂಡುಗಿಳಿಯಾರಿನಲ್ಲಿ ಸುಮಾರು ೨೦ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ ಯೋಗಬನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪ್ರಾಕೃತಿಕವಾದ ಜೀವನವೆಂದರೆ ಸ್ವಾಭಾವಿಕ ಜೀವನ. ನಾವೆಲ್ಲರೂ ಸ್ವಾಭಾವಿಕವಾದ ಜೀವನವನ್ನು ನಡೆಸಬೇಕು. ಆದರೆ ನಾವು ಇತರರನ್ನು ಅನುಕರಣೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಪ್ರತೀ ವಿಚಾರದಲ್ಲೂ ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೇವೆ. ಸ್ವಂತಿಕೆ ಕಳೆದುಕೊಂಡು ಇನ್ನೊಬ್ಬರನ್ನು ಅನುಕರಣೆ ಮಾಡುವ ಪ್ರವೃತ್ತಿ ಬಹಳ ಅಪಾಯಕಾರಿ. ರೋಗರುಜಿನಗಳು ಬಂದಾಗ ಪ್ರಾಕೃತಿಕ ಚಿಕಿತ್ಸೆಗಳನ್ನು ಅನುಸರಿಸುವ ಮೂಲಕ ರೋಗಗಳನ್ನು ನಿವಾರಣೆ ಮಾಡಬಹುದು. ಸರ್ವಕ್ಷೇಮ ಹೆಸರೇ ಹೇಳುವಂತೆ ಎಲ್ಲರೂ ಕ್ಷೇಮದಿಂದರಲಿ ಎನ್ನುವುದು ಈ ಚಿಕಿತ್ಸಾಲಯದ ಆಶಯ. ಸುಂದರವಾದ ವಿನ್ಯಾಸದ, ಭಾರತೀಯ ಪ್ರಕೃತಿ ಹವಮಾನಗಳಿಗನುಸಾರವಾಗಿ ಗಾಳಿ, ಬೆಳಕು ಬರುವಂತಹ ವಿನೂತನ ಕಟ್ಟಡವನ್ನು ನಿರ್ಮಾಣ ಮಾಡಿರುವ ಡಾ. ವಿವೇಕ್ ಮತ್ತವರ ತಂಡಕ್ಕೆ ಅಭಿನಂದನೆಗಳು. ಮುಂದೊಂದು ದಿನ ಅಂತರಾಷ್ಟ್ರೀಯ ಮಟ್ಟದಲ್ಲಿ ಇದೊಂದು ಶ್ರೇಷ್ಠ ಕೇಂದ್ರವಾಗಿ ಹೊರಹೊಮ್ಮಲಿ ಎಂದು ಶುಭಹಾರೈಸಿದರು.
ಇಡೀ ವಿಶ್ವದಲ್ಲೇ ಭಾರತವನ್ನು ಹೆಮ್ಮೆಯ ರಾಷ್ಟ್ರವನ್ನಾಗಿ ತೋರಿಸಿಕೊಟ್ಟವರು ಸ್ವಾಮಿ ವಿವೇಕಾನಂದರು. ದೇಶ ಸಬಲವಾಗಿರಬೇಕಿದ್ದರೆ ಯುವ ಸಮುದಾಯ ಸದೃಢವಾಗಿರಬೇಕು. ಯುವಸಮುದಾಯ ದುರ್ಬಲವಾದರೆ ಆ ದೇಶಕ್ಕೆ ಭವಿಷ್ಯವಿಲ್ಲ ಎನ್ನುವುದು ವಿವೇಕಾನಂದರ ನಂಬಿಕೆಯಾಗಿತ್ತು. ಆದ್ಯಾತ್ಮಿಕವಾಗಿ ಇಂದಿಗೂ ಕೂಡ ನಮ್ಮ ದೇಶ ಬಲಿಷ್ಠವಾದ ದೇಶ ಎಂದು ತೋರಿಸಿಕೊಟ್ಟವರು ಸ್ವಾಮಿ ವಿವೇಕಾನಂದರು. ಇಂತಹ ವಿವೇಕಾನಂದರ ೩೫ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ವಿವೇಕಾನಂದರ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಲಾಗಿದೆ ಎಂದರು.
ಸಿಮೆಂಟಿನಲ್ಲಿ ರಚಿಸಲಾದ ಜಗತ್ತಿನ ಅತೀ ಎತ್ತರದ ಸ್ವಾಮಿ ವಿವೇಕಾನಂದರ ೩೫ಅಡಿ ಎತ್ತರದ ಪ್ರತಿಮೆಯನ್ನು ಕ್ರೇನ್ ಸಹಾಯದಿಂದ ಮುಚ್ಚಲಾಗಿರುವ ಬಟ್ಟೆಯನ್ನು ತೆರವುಗೊಳಿಸವುದರ ಮೂಲಕ ಜಿಗಣಿಯ ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಚ್. ಆರ್. ನಾಗೇಂದ್ರ. ಜೀ ಅನಾವರಣಗೊಳಿಸಿದರು.
ಸಾಲಿಗ್ರಾಮ ಡಿವೈನ್ ಪಾರ್ಕ್ ಟ್ರಸ್ಟ್‌ನ ಆಡಳಿತ ನಿರ್ದೇಶಕ ಡಾಕ್ಟರ್‌ಜೀ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಯೋಗಭಾರತಿ ಯುಎಸ್‌ಎ ಇದರ ಚೇರ್‌ಮೆನ್ ರಘುರಾಮ್ ಜೀ, ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಎಸ್ ಯಡಪಡಿತ್ತಾಯ, ಬೆಂಗಳೂರು ಯೋಗ ಹಾಗೂ ಪ್ರಕೃತಿ ಚಿಕಿತ್ಸಾಲಯ ಸಂಸ್ಥಾಪಕ ಡಾ. ವೈರುದ್ರಪ್ಪ, ಮಣಿಪಾಲ ವಿಶ್ವವಿದ್ಯಾಲಯದ ಡಾ. ಜಿ. ಅರುಣ್ ಮಯ್ಯ, ಡಾ. ಪ್ರಶಾಂತ ಶೆಟ್ಟಿ, ಡಾ. ನವೀನ್ ಕೆವಿ, ಡಾ. ರಾಘವೇಂದ್ರ ರಾವ್. ಎಮ್, ಡಾ. ಮಂಜುನಾಥ್ ಎನ್.ಕೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಂಗಳೂರು ಕರ್ನಾಟಕ ಬ್ಯಾಕ್‌ನ ಜನರಲ್ ಮ್ಯಾನೇಜರ್ ನಾಗರಾಜ್, ಎಸ್‌ಎಚ್‌ಆರ್‌ಎಫ್ ಮುಖ್ಯಸ್ಥರಾದ ಡಾ. ವಾದಿರಾಜ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ ಮೊದಲಾದವರು ಇದ್ದರು.
ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠನದ ವೈದ್ಯಕೀಯ ನಿರ್ದೇಶಕ ಡಾ. ಎ ವಿವೇಕ್ ಉಡುಪ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈನ್‍ಪಾರ್ಕ್ ಟ್ರಸ್ಟ್ ನ ಆಡಳಿತ ನಿರ್ದೇಶಕರಾದ ಡಾ. ಜೀ ಮಾತನಾಡಿ, “ಶಾಂತಿ, ನೆಮ್ಮದಿ ಅರಸುವವರಿಗೆ ಇದು ಪ್ರಶಸ್ತ ಜಾಗ. ಪ್ರಕೃತಿ ಚಿಕಿತ್ಸೆ ಇವತ್ತು ವಿಶ್ವದಾದ್ಯಂತ ಪಸರಿಸಿದೆ. ಇದಕ್ಕೆ ಕಾರಣ ನಮ್ಮ ಪ್ರಕೃತಿಯಲ್ಲಿಯೇ ಇರುವ ಔಷಧಿ ಗುಣ. ನಾವು ಇದನ್ನು ಬೆಳೆಸಿ ಉಳಿಸಬೇಕಿದೆ’ ಎಂದರು.
“ರುದ್ರಿ” ಸಿನಿಮಾದ ನಾಯಕಿ ಹಾಗೂ ನಟಿ ಪಾವನಾ ಗೌಡ ಮಾತನಾಡಿ, “ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಘಟನೆಗಳು ನಿತ್ಯ ನಡೆಯುತ್ತವೆ. ನಮ್ಮ ಸಿನಿಮಾ “ರುದ್ರಿ’ ಕೂಡ ಇಂತದ್ದೇ ಒಂದು ಕಥೆಯನ್ನು ಒಳಗೊಂಡಿದೆ. ಪ್ರಕೃತಿ ನಮ್ಮ ಎಲ್ಲಾ ಪ್ರಶ್ನೆಗಳು ಉತ್ತರ ನೀಡಬಲ್ಲದು. ಹಾಗೇ ಇಲ್ಲಿ ಸಿಗುವ ಚಿಕಿತ್ಸೆ ಕೂಡ ಇಂದು ತೀರಾ ಅನಿವಾರ್ಯವಾಗಿದೆ’ ಎಂದರು. ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ್ ಉಡುಪ ಹಾಗೂ ವಿವೇಕ್ ಉಡುಪ ಇದ್ದರು.
ಆಸ್ಪತ್ರೆ ವಿಶೇಷತೆ:
ಪ್ರಾಚೀನ ದೇಗುಲದ ವಾಸ್ತು ವಿನ್ಯಾಸವನ್ನು ಹೊಂದಿದ ಜಗತ್ತಿನ ಪ್ರಥಮ ಯೋಗ ಆಸ್ಪತ್ರೆ. ಆಯುಷ್ ವಿಭಾಗದಲ್ಲಿ ದೇಶದ ಪ್ರಥಮ ಪರಿಸರ ಸ್ನೇಹಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ. ಕರಾವಳಿಯ ಪ್ರಾಚೀನ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಪ್ರಕೃತಿ, ಯೋಗ, ಆಹಾರ, ಅಧ್ಯಾತ್ಮಿಕ, ಸಂಗೀತ, ಹಸಿರು, ಹಾಸ್ಯ, ಮೌನ ಚಿಕಿತ್ಸೆಯ ಸಂಗಮ. ಪರಿಸರ ಸ್ನೇಹಿ ಆಸ್ಪತ್ರೆ ಇದಾಗಿದೆ. ಸೋಲಾರ್ ವ್ಯವಸ್ಥೆ ಇದೆ. ಸೈಕಲ್ ಟ್ರ್ಯಾಕ್ ಕೂಡ ನಿರ್ಮಾಣಗೊಂಡಿದೆ.
ಏನಿದು ಡಿವೈನ್ ಪಾರ್ಕ್ ಟ್ರಸ್ಟ್:
ವ್ಯಕ್ತಿತ್ವ ನಿರ್ಮಾಣ ಹಾಗೂ ರಾಷ್ಟ್ರೋತ್ಥಾನದ ಬೇರೆ ಬೇರೆ ಯೋಜನೆಗಳಲ್ಲಿ ಅಧ್ಯಾತ್ಮ, ಆರೋಗ್ಯ, ಯೋಗದ ಮಹಿಮೆಯನ್ನು ತಿಳಿಸಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
ಪ್ರತಿಮೆ ವಿಶೇಷತೆ:
ಇದು ಜಗತ್ತಿನಲ್ಲೇ ಅತಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆಯಾಗಿದೆ. 35 ಅಡಿ ಎತ್ತರ ಇದೆ. ಪ್ರತಿಮೆಗೆ ವಿಶೇಷವಾದ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಹಸಿರು ಹುಲ್ಲು ಹಾಸಿನ ನಡುವೆ ಇರಿಸಲಾಗಿದೆ.