ಮೂಡುಬಿದಿರೆ:ಆಳ್ವಾಸ್ ಪ.ಪೂ. ಕಾಲೇಜಿನಲ್ಲಿ ಎನ್‌ಎಸ್‌ಎಸ್ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ 2025–26 ನೇ ಶೈಕ್ಷಣಿಕ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್) ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಶುಕ್ರವಾರ ಕಾಲೇಜಿನ ಆವರಣದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರ್ಕಳದ ಮಂಜುನಾಥ ಪೈ ಮೆಮೋರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸುದರ್ಶನ್ ಪಿ. ಅವರು ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡುತ್ತಾ, “ಎನ್‌ಎಸ್‌ಎಸ್ ನಮ್ಮ ಜೀವನದ ಪಥವನ್ನೇ ಬದಲಾಯಿಸಬಲ್ಲ ಶಕ್ತಿ ಹೊಂದಿದೆ. ವಿದ್ಯಾರ್ಥಿಗಳು ತಮ್ಮೊಳಗಿನ ಅಧಮ್ಯ ಶಕ್ತಿಯನ್ನು ಗುರುತಿಸಿ, ಸದುಪಯೋಗಪಡಿಸಿಕೊಳ್ಳಬೇಕು. ದೈಹಿಕ ಸ್ವಚ್ಛತೆ ಜೊತೆಗೆ ಮಾನಸಿಕ ಸ್ವಚ್ಛತೆಯೂ ಅಗತ್ಯ. ಹೃದಯ ಶ್ರೀಮಂತಿಕೆ ಆರ್ಥಿಕ ಶ್ರೀಮಂತಿಕೆಗಿಂತ ಮಿಗಿಲಾದದು’.

“ಅಂಬಾನಿಯವರಂತಹ ಉದ್ಯಮಿಗಳೂ ಚಿಕ್ಕಮಟ್ಟದಲ್ಲಿ ಪ್ರಾರಂಭಿಸಿ ಇಂದು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದಾರೆ. ವಿದ್ಯಾರ್ಥಿಗಳು ಶಿಸ್ತು, ಪ್ರಾಮಾಣಿಕತೆ, ಸಂವಹನ ಕೌಶಲ್ಯಗಳೊಂದಿಗೆ ಕಾರ್ಯನಿರ್ವಹಿಸಬೇಕು. ಈಗ ನಿಮ್ಹಾನ್ಸ್ನಂತಹ ಸಂಸ್ಥೆಗಳು ಮೊಬೈಲ್ ಮಧ್ಯವರ್ಜನ ಶಿಬಿರಗಳನ್ನು ನಡೆಸುವ ಪರಿಸ್ಥಿತಿ ಬಂದೊದಗಿದೆ. ಇದು ಅಪಾಯದ ಸಂಕೇತ. ‘ಲೈಫ್ ಇಸ್ ಶಾರ್ಟ್, ಮೇಕ್ ಇಟ್ ಸ್ವೀಟ್ – ಫಾರ್ ದಾಟ್ ಎನ್‌ಎಸ್‌ಎಸ್ ಇಸ್ ದ ಬೆಸ್ಟ್’ ಎಂದು ಉಲ್ಲೇಖಿಸಿದರು.

ನಾವು ನಮ್ಮ ದೃಷ್ಟಿಕೋನವನ್ನು ಬದಲಾಯಿಸಬೇಕು. ಜ್ಞಾನಕ್ಕೆ ಸಮನಾದದ್ದು ಯಾವುದು ಇಲ್ಲ. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರಿಗೆ ಇರಬೇಕಾದ ಗುಣಗಳಾದ ನಾಯಕತ್ವ, ಪ್ರಾಮಾಣಿಕತೆ ,ಸಂವಹನ ಮುಂತಾದವುಗಳ ಬಗ್ಗೆ ಹೇಳಿ, ಸೇವೆಯ ಮಹತ್ವವನ್ನು ತಿಳಿಸಿದರು. ವಿದ್ಯೆಯೊಂದಿಗೆ ನಾವು ಸದ್ಬುದ್ಧಿಯನ್ನು ಬೆಳೆಸಿಕೊಳ್ಳಬೇಕು. ಸಂಪನ್ಮೂಲಗಳನ್ನು ಬಹಳ ಸುರಕ್ಷತೆಯಿಂದ ಬಳಸಿ. ಮನುಷ್ಯರನ್ನು ಗೌರವಿಸಿ, ನಾವೆಲ್ಲರೂ ಪರಸ್ಪರ ಅವಲಂಬಿತರು. ಕ್ರಿಯಾಶೀಲ ವ್ಯಕ್ತಿ ಕಾರ್ಮೋಡವನ್ನು ಕರಗಿಸಬಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಪ.ಪೂ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್, “ರಾಷ್ಟ್ರೀಯ ಸೇವಾ ಯೋಜನೆ ಎಂಬುದು ಯಾವುದೇ ಹುದ್ದೆ ಅಲ್ಲ. ಅದು ಮಾನವೀಯತೆಯ ಜವಾಬ್ದಾರಿ. ಮಾನವೀಯತೆಯನ್ನು ಅಳವಡಿಸಿಕೊಂಡು, ನಿಸ್ವಾರ್ಥ ಸೇವೆಯನ್ನು ಮಾಡಬೇಕು. ನಾವು ಭಾರತೀಯರು, ಭಾರತೀಯ ಸಂಸ್ಕೃತಿಯನ್ನು ಸದಾ ಪಾಲಿಸಬೇಕು ಎಂದರು.

ಮೊಬೈಲ್ ಬಳಕೆ ಮಿತಿಯಲ್ಲಿರಲಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಡೀನ್ ಡಾ. ಪ್ರಶಾಂತ್ ಎಂ.ಡಿ., ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಷ್ ಚಿಪ್ಳೂಣಕರ್ ಇದ್ದರು. ಎನ್‌ಎಸ್‌ಎಸ್ ಸಂಯೋಜಕಿ ಮೇಘನಾ ಅತಿಥಿಗಳನ್ನು ಸ್ವಾಗತಿಸಿ, ಸ್ವಯಂಸೇವಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಅತಿಥಿ ಪರಿಚಯವನ್ನು ಉಪನ್ಯಾಸಕಿ ಸ್ವಾತಿ ನಿರ್ವಹಿಸಿ, ಧನ್ಯವಾದ ಸಮರ್ಪಣೆಯನ್ನು ಕನ್ನಡ ಉಪನ್ಯಾಸಕ ಗಣಪತಿ ನಾಯಕ್‌ಗೈದರು. ಕಾರ್ಯಕ್ರಮದ ನಿರ್ವಹಣೆಯನ್ನು ಗಣಿತ ವಿಭಾಗದ ಮುಖ್ಯಸ್ಥ ಪ್ರಭಾತ್ ನಿರ್ವಹಿಸಿದರು.