ಮೂಡುಬಿದಿರೆ: ಅಭಿವೃದ್ಧಿಯ ಹಾದಿಯಲ್ಲಿ ಮುಂಚೂಣಿಯಲ್ಲಿರುವ ದೇಶಗಳು ಉದ್ಯಮಶೀಲತೆ ಮತ್ತು ತಾಂತ್ರಿಕ ಶಿಕ್ಷಣಕ್ಕೆ ನೀಡಿದ ಆದ್ಯತೆಯಿಂದವೇ ಈ ಯಶಸ್ಸು ಲಭಿಸಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನುಡಿದರು.
ಅವರು ಸೋಮವಾರ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಷ್ಟ್ರೀಯ ಪ್ರಧಾನ ಕಚೇರಿ, ರಾಜ್ಯ ಪ್ರಧಾನ ಕಚೇರಿ, ದಕ್ಷಿಣ ಕನ್ನಡ ಘಟಕ ಹಾಗೂ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಅವರ ಸಂಯುಕ್ತ ಆಶ್ರಯದಲ್ಲಿ ಮೂಡಬಿದಿರೆಯಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ, ಉದ್ಯಮಶೀಲತೆ ಮತ್ತು ಸ್ಟೆಮ್ ಕುರಿತು ಐದು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸಮಾಜದ ಅಭಿವೃದ್ಧಿಗೆ ಯುವಕರು ವಿಮರ್ಶೆಗಿಂತ ಕ್ರಿಯೆಗೆ ಆದ್ಯತೆ ನೀಡಬೇಕು. ಸಮಾಜದ ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಹುಡುಕಿ, ಆವಿಷ್ಕಾರಾತ್ಮಕ ಚಿಂತನೆ ಮೂಲಕ ಬದಲಾವಣೆ ತರಬೇಕು. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಯೇ ಪ್ರಗತಿಯ ಕೀಲಿಕೈ ಎಂದರು.
ಜೀವನದಲ್ಲಿ ಯಶಸ್ವಿಯಾದ ಪ್ರತೀ ವ್ಯಕ್ತಿಗಳು, ತಮ್ಮ ಜೀವನದ ಆರಂಭದಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ನಂತಹ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಈ ಸಂಘಟನೆಗಳು ಸಾಮಾಜಿಕ ಜೀವನದ ನಿಜವಾದ ಅರ್ಥವನ್ನು ತಿಳಿಸಲು ನೆರವಾಗುತ್ತವೆ ಎಂದರು.

ಪ್ರಾಕೃತಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ಮಂಗಳೂರನ್ನು ನವೀನತೆ ಮತ್ತು ಸಂಶೋಧನೆಯೊಂದಿಗಿನ ಉದ್ಯಮಾಶೀಲಾ ಕೇಂದ್ರವನ್ನಾಗಿಸಲು ‘ಬೊಲ್ಪು ಪ್ಲ್ಯಾನ್’ ಸೇರಿ ಅನೇಕ ಯೋಜನೆಗಳು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕಾರ್ಯಾಗಾರದಲ್ಲಿ ಪಡೆದ ತರಬೇತಿ ಹಾಗೂ ಅನುಭವವನ್ನು, ಕೌಶಲ್ಯ ವೃದ್ಧಿಗೆ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಹಿಂದೆ ಈ ಭಾಗದವರು ಉದ್ಯೋಗ ಅಥವಾ ಉದ್ಯಮಕ್ಕಾಗಿ ಹೊರನಾಡಿಗೆ ತೆರಳುತ್ತಿದ್ದರು. ಆದರೆ ಈಗ ಸಂಸದರ ಪ್ರೇರಣೆಯಿಂದ ಸ್ಥಳೀಯ ಯುವಕರು ಮತ್ತು ಉದ್ಯಮಿಗಳು ತಮ್ಮ ಊರಿನಲ್ಲಿಯೇ ಉದ್ಯಮ ಆರಂಭಿಸಲು ಉತ್ಸುಕರಾಗಿದ್ದಾರೆ. ಮಂಗಳೂರನ್ನು ಜಾಗತಿಕ ಮಟ್ಟದ ‘ಸಿಲಿಕಾನ್ ವ್ಯಾಲಿ’ಯಾಗಿ ರೂಪಿಸುವಲ್ಲಿನ ಸಂಸದರ ಕರ‍್ಯ ನಿಜಕ್ಕೂ ಶ್ಲಾಘನೀಯ ಎಂದರು.
ಕಾರ‍್ಯಗಾರದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ನ ನವದೆಹಲಿ ಮಾಜಿ ನಿರ್ದೇಶಕ ಕೃಷ್ಣಸ್ವಾಮಿ, ಕ್ಯಾಂಪ್ ಲೀಡರ್ ಅವಲೇಂದ್ರ ಶರ್ಮಾ, ಸ್ವಸ್ತಿಕ್ ಬಿಸಿನೆಸ್ ಸ್ಕೂಲ್ ನ ನಿರ್ದೇಶಕ ಡಾ ರಾಘವೇಂದ್ರ ಹೊಳ್ಳ, ಉದ್ಯಮಿ ಈಶ್ವರ್ ಶೆಟ್ಟಿ, ಎಂಬಿಎ ವಿಭಾಗದ ಮುಖ್ಯಸ್ಥೆ ಪ್ರಿಯಾ ಸಿಕ್ವೇರಾ, ಹಾಗೂ ಎಐ ಮತ್ತು ಎಂಎಲ್ ವಿಭಾಗದ ಮುಖ್ಯಸ್ಥ ಡಾ ಹರೀಶ್ ಕುಂದರ್ ಇದ್ದರು. ತ್ರಿಷಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.



















