ಮೂಡುಬಿದಿರೆ:ಆಳ್ವಾಸ್‌ನಲ್ಲಿ ‘ಪ್ರಾಣ’ ಸಮಗ್ರ ಸ್ವಾಸ್ಥ್ಯಧಾಮ ಉದ್ಘಾಟನೆ

ಮೂಡಬಿದಿರೆ: ಪ್ರತಿ ಜ್ಞಾನೇಂದ್ರೀಯವನ್ನೂ ಪ್ರಕೃತಿಯೇ ಅದ್ಭುತವಾಗಿ ಸೃಷ್ಟಿಸಿದೆ. ಇವುಗಳ ಸಮತೋಲನ ಮತ್ತು ಸಾಮರಸ್ಯ ಮಾನವನ ಮನಸ್ಸು, ದೇಹ ಹಾಗೂ ಆತ್ಮದ ಶಾಂತಿಗೆ ಆಧಾರವಾಗಿವೆ. ಆದರೆ ಇಂದಿನ ಜೀವನ ಶೈಲಿಯಲ್ಲಿ ನಾವು ಇಂದ್ರಿಯ ಉಪಕಾರವನ್ನು ಮರೆತು, ಅವುಗಳಿಗೆ ಹಿತವಲ್ಲದ ವಿಷಯಗಳಲ್ಲಿ ತೊಡಗಿಕೊಂಡಿದ್ದೇವೆ. ಕಣ್ಣು ಸೌಂದರ್ಯವನ್ನು, ಕಿವಿ ಸುಶ್ರಾವ್ಯತೆಯನ್ನು, ನಾಸಿಕ ಸುವಾಸನೆಯನ್ನು, ನಾಲಿಗೆ ರುಚಿಯನ್ನು ಹಾಗೂ ತ್ವಚೆ ಕೋಮಲತೆಯನ್ನು ಬಯಸುತ್ತದೆ. ಈ ಪಂಚೇಂದ್ರಿಯಗಳ ಪ್ರಜ್ಞಾಪೂರ್ವಕ ಸಂತೃಪ್ತಿಯ ಮೂಲಕ ಸಮಗ್ರ ಆರೋಗ್ಯವನ್ನು ಪಡೆಯಬಹುದು ಎಂದು ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಆಶಾ ಜ್ಯೋತಿ ರೈ ಹೇಳಿದರು.

ಅವರು ಮಿಜಾರಿನ ಆಳ್ವಾಸ್ ಆನಂದಮಯ ಆರೋಗ್ಯಧಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಮಗ್ರ ಸ್ವಾಸ್ಥ್ಯಧಾಮ ‘ಪ್ರಾಣ’ ಪ್ರಕೃತಿ ಚಿಕಿತ್ಸಾ ಸ್ಪಾ ವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಪಂಚಭೂತಗಳ ಸಮನ್ವಯ ಹಾಗೂ ಇಂದ್ರಿಯಗಳ ಸಾತ್ವಿಕ ಶಾಂತಿ ದೈಹಿಕ ವಿಶ್ರಾಂತಿಯ ಜೊತೆಗೆ ಮಾನಸಿಕ ಸ್ಥಿತಪ್ರಜ್ಞೆಗೂ ದಾರಿ ಮಾಡುತ್ತದೆ. ಈ ಕೇಂದ್ರದ ಮೂಲಕ ಸಮೃದ್ಧ ಸಮುದಾಯದ ಆರೋಗ್ಯದ ಬೆಳವಣಿಗೆ ಸಾಧ್ಯವಾಗಲಿ ಎಂದು ಅವರು ಆಶಿಸಿದರು.

ಖ್ಯಾತ ಗಾಯಕಿ ಅಖಿಲಾ ಪಜಿಮಣ್ಣು ಮಾತನಾಡಿ, ನಮ್ಮ ಬದುಕು ಪ್ರಕೃತಿಯೊಂದಿಗೆ ಸಾಗಬೇಕು. ಪ್ರಕೃತಿಯೊಡನೆ ಹೆಜ್ಜೆ ಹಾಕಿದಾಗಲೇ ನೆಮ್ಮದಿಯ ಜೀವನ ಸಾಧ್ಯ. ಹೆಚ್.ಎಸ್. ವೆಂಕಟೇಶ್‌ಮೂರ್ತಿಯವರ ಪ್ರಸಿದ್ಧ ಗೀತೆಯಾದ “ಎಲ್ಲಾ ನಿನ್ನ ಲೀಲೆ ತಾಯೇ, ಎಲ್ಲಾ ನಿನ್ನ ಮಾಯೆ ತಾಯೇ” ಹಾಡಿನ ಸಾಲುಗಳನ್ನು ಆಲಪಿಸಿ, ಪ್ರಕೃತಿಯ ಪ್ರಾಮುಖ್ಯತೆ ಮತ್ತು ಸೌಂದರ್ಯವನ್ನು ಸ್ಮರಿಸಿದರು. ಮನುಷ್ಯ ಎಷ್ಟೇ ಪ್ರಕೃತಿಯನ್ನು ಹಾನಿಗೊಳಿಸಿದರೂ, ಆ ತಾಯಿಯ ಮಮತೆ ಎಂದಿಗೂ ಕಡಿಮೆಯಾಗದು ಎಂದು ಹೇಳಿದರು.

ಆಳ್ವಾ ಫಾರ್ಮಾಸಿಯ ಆಡಳಿತಾಧಿಕಾರಿ ಹಾಗೂ ಪ್ರಾಣ ಸ್ಪಾ ನ ನಿರ್ದೇಶಕಿ ಡಾ. ಗ್ರೀಷ್ಮಾ ವಿವೇಕ್ ಆಳ್ವ ಮಾತನಾಡಿ, ಈ ಕೇಂದ್ರದಲ್ಲಿ ಮುಖ ತೇಜಸ್ಸು ವೃದ್ಧಿ ಚಿಕಿತ್ಸೆ, ಕೇಶಕಾಂತಿ ಕ್ರಿಯಾ, ಪಾದಕಾಂತಿ ಕ್ರಿಯಾ ಮುಂತಾದ ಸೌಂದರ್ಯ ಚಿಕಿತ್ಸೆಗಳ ಜೊತೆಗೆ ಸಂಪ್ರದಾಯಿಕ ಚೈನೀಸ್ ತಂತ್ರಗಳು ಮತ್ತು ನವೀನ ಕೊರಿಯನ್ ವಿಧಾನಗಳನ್ನು ಅಳವಡಿಸಲಾಗಿದೆ. ನೂರು ಶೇಕಡಾ ಪ್ರಾಕೃತಿಕ ಉತ್ಪನ್ನಗಳ ಬಳಕೆಯಿಂದ ಇಂದ್ರಿಯಗಳಿಗೆ ಸಂತೋಷ ನೀಡುವ ಮತ್ತು ನೈಜ ಕಾಂತಿಯನ್ನು ವೃದ್ಧಿಸುವ ಅವಕಾಶ ಇಲ್ಲಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, “ಆಯುರ್ವೇದ ಮತ್ತು ನ್ಯಾಚುರೋಪಥಿ ವೈದ್ಯಪದ್ದತಿಯನ್ನು ವಿಶ್ವಕ್ಕೆ ನೀಡಿದ ದೇಶ ಭಾರತ. ಔಷಧವಿಲ್ಲದೆ ರೋಗವನ್ನು ಗುಣಪಡಿಸುವ ಪ್ರಕೃತಿ ಚಿಕಿತ್ಸೆ ಪದ್ಧತಿ ಈಗ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಯೋಗ, ಧ್ಯಾನ ಮತ್ತು ಆರೈಕೆಯ ಸಂಯೋಜನೆಯ ಮೂಲಕ ನೈಜ ಆರೋಗ್ಯ ಸಂರಕ್ಷಣೆ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಯಶ್ರೀ ಅಮರನಾಥ್ ಶೆಟ್ಟಿ, ಉದ್ಯಮಿ ಕೆ.ಶ್ರೀಪತಿ ಭಟ್, ಕುಲದೀಪ್ ಎಂ, ವಿವೇಕ ಆಳ್ವ, ಡಾ ಹನಾ ಹಾಗೂ ಇನ್ನಿತರರು ಇದ್ದರು. ಡಾ ಸುಧಾರಾಣಿ ಕಾರ‍್ಯಕ್ರಮ ನಿರೂಪಿಸಿದರು.