ಮೂಡುಬಿದಿರೆ: ಅಕ್ರಮವಾಗಿ ಜಾನುವಾರುಗಳನ್ನು ತುಂಬಿಸಿಕೊಂಡು ಸಾಗಿಸುತ್ತಿದ್ದ ಕಾರೊಂದನ್ನು ಪೊಲೀಸರು ಹಿಂಬಾಲಿಸಿಕೊಂಡು ಹೋಗಿ ಗಾಳಿಯಲ್ಲಿ ಗುಂಡು ಹಾರಿಸಿ ಹಿಡಿದ ಘಟನೆ ಮೂಡುಬಿದಿರೆ ಶಿರ್ತಾಡಿಯ ಓದಾಲ್ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ.
ಪೊಲೀಸರ ಗುಂಡಿನ ಸದ್ದಿಗೆ ಬೆದರಿದ ಆರೋಪಿಗಳು ಕಾರನ್ನು ರಸ್ತೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ರಿಡ್ಜ್ ಕಾರು ಮತ್ತು ಅದರೊಳಗೆ ಹಿಂಸಾತ್ಮಕ ರೀತಿಯಲ್ಲಿ ತುಂಬಿದ್ದ ಆರು ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿರ್ತಾಡಿಯಿಂದ ಓದಾಲ್ ಕಡೆಗೆ ಅಕ್ರಮವಾಗಿ ಗೋ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದ ತಕ್ಷಣ ಸರ್ಕಲ್ ಇನ್ ಸ್ಪೆಕ್ಟರ್ ದಿನೇಶ್ ಕುಮಾರ್ ನೇತೃತ್ವದ ತಂಡ ಅಲರ್ಟ್ ಆಗಿತ್ತು. ಅಲ್ಲದೆ, ರಸ್ತೆಯಲ್ಲಿ ಬರುತ್ತಿದ್ದ ಕಾರನ್ನು ಪೊಲೀಸರು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಗೋಕಳ್ಳರು ಕಾರು ನಿಲ್ಲಿಸದೆ ಪೊಲೀಸ್ ಜೀಪ್ ಗೆ ಡಿಕ್ಕಿ ಹೊಡೆಯಲು ಯತ್ನಿಸಿದ್ದಾರೆ.
ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ, ಕಾರನ್ನು ಹಿಂಬಾಲಿಸಿಕೊಂಡು ಹಿಡಿದಿದ್ದಾರೆ. ಆರೋಪಿಗಳು ಕಾರನ್ನು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಕಾರು ಮತ್ತು ಆರು ಜಾನುವಾರಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.