ಕೇರಳಕ್ಕೆ ಎಂಟ್ರಿ ಕೊಟ್ಟ ಮುಂಗಾರು: ಕೆಲವೇ ದಿನಗಳಲ್ಲಿ ರಾಜ್ಯಕ್ಕೂ ಪ್ರವೇಶ, ಕೃಷಿಕರ ಮೊಗದಲ್ಲಿ ಮಂದಹಾಸ

ನವದೆಹಲಿ: ಕಳೆದ ಕೆಲವು ದಿನಗಳಿಂದ ವಾಯುಭಾರ ಕುಸಿತದಿಂದ ಸುರಿಯುತ್ತಿರುವ ಮಳೆಯ ಬೆನ್ನಲ್ಲೇ ಕೇರಳದಿಂದ ಗುಡ್ ನ್ಯೂಸ್ ಬಂದಿದೆ. ಹೌದು  ಭಾರತೀಯ ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ಭಾರತಕ್ಕೆ ನಿಗಧಿತ ಅವಧಿಗಿಂತ ಮುಂಚಿತವಾಗಿಯೇ ನೈಋತ್ಯ ಮಾನ್ಸೂನ್ ಮಾರುತಗಳು ಆಗಮಿಸಿದ್ದು, ಶನಿವಾರ ಕೇರಳ ರಾಜ್ಯಕ್ಕೆ ಪ್ರವೇಶಿಸಿದ್ದೇ ಆ ಗುಡ್ ನ್ಯೂಸ್.

2009ರ ಬಳಿಕ ಇದೇ ಮೊದಲ ಬಾರಿಗೆ ಮಾನ್ಸೂನ್ ಮಾರುತಗಳು ನಿಗಧಿತ ಅವಧಿಗಿಂತ ಮುಂಚಿತವಾಗಿಯೇ ಭಾರತ ಪ್ರವೇಶಿಸಿರುವುದು ವಿಶೇಷ ಸಂಗತಿ.ಇದು ದಾಖಲೆ ಕೂಡ.

ಈ ಹಿಂದೆ 2009ರಲ್ಲಿ ಮೇ 23 ರಂದು ದಕ್ಷಿಣ ರಾಜ್ಯ ಕೇರಳಕ್ಕೆ ಮಾನ್ಸೂನ್ ಮಾರುತಗಳು ಪ್ರವೇಶ ಮಾಡಿದ್ದವು. ಬಳಿಕ ಇದೇ ಮೊದಲ ಬಾರಿಗೆ ಮಾನ್ಸೂನ್ ಮಾರುತಗಳು ಕೇರಳ ಮೂಲಕ ಭಾರತ ಪ್ರವೇಶ ಮಾಡಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಹಿಂದೆಲ್ಲಾ ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್ ಜೂನ್ 1 ರ ವೇಳೆಗೆ ಕೇರಳದ ಮೇಲೆ ಪ್ರಾರಂಭವಾಗುತ್ತಿತ್ತು. ಮತ್ತು ಜುಲೈ 8 ರ ವೇಳೆಗೆ ಇಡೀ ದೇಶವನ್ನು ಆವರಿಸಿಕೊಳಳುತ್ತಿತ್ತು. ಆದರೆ ಈ ಬಾರಿ ಆರೇಳು ದಿನ ಮುಂಚಿತಾಗಿಯೇ ಕೇರಳಕ್ಕೆ ಮುಂಗಾರು ಪ್ರವೇಶಗೊಂಡಿದೆ. ಜೂನ್ ತಿಂಗಳು ಆರಂಭಗೊಳ್ಳುವ ಮೊದಲೇ ಕರ್ನಾಟಕಕ್ಕೂ ಮುಂಗಾರು ಎಂಟ್ರೀ ನೀಡಲಿದ್ದು ಈಗಾಗಲೇ ಈ ಸುದ್ದಿಯಿಂದ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ.

ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ಮುಂಗಾರು ಮಳೆ ಸಾಧ್ಯತೆ: ತಜ್ಞರು