ರಾಜಸ್ಥಾನ: ರಾಜಸ್ಥಾನದ ಸಿರೊಹಿಯಲ್ಲಿ ಭಾರೀ ಬಿಸಿಲಿನಿಂದಾಗಿ ಜನಸಾಮಾನ್ಯರ ಜತೆಗೆ ಪ್ರಾಣಿಗಳೂ ತತ್ತರಿಸಿದ್ದು, ಬಿಸಿಲು ಮತ್ತು ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಬಳಲುತ್ತಿವೆ. ಹೀಗೆ ಬಳಲಿದ ಮಂಗಗಳಿಗೆ ಹಸುವೊಂದು ಹಾಲುಣಿಸಿದ ಅಚ್ಚರಿಯ ಸಂಗತಿ ನಡೆದಿದೆ.
ಸಿರೋಹಿ ಜಿಲ್ಲೆಯ ಪಿಂಡ್ವಾಲಾ ಪ್ರದೇಶದಲ್ಲಿ ವಿಪಿನ್ ಸಮೀಪದ ರೋಹಿಡಾದ ಜಬೇಶ್ವರ ಮಹಾದೇವ್ ದೇವಾಲಯದಲ್ಲಿ ಇರುವ ಹಸು ಮಂಗಗಳಿಗೆ ಹಾಲುಣಿಸಿ ಭಾರೀ ಸುದ್ದಿಯಾಗಿದೆ. ಹಲವು ವರ್ಷಗಳಿಂದ ರೋಹಿಡಾದ ಜಬೇಶ್ವರ ಮಹಾದೇವ್ ದೇವಾಲಯದಲ್ಲಿಯೇ ವಾಸಿಸುತ್ತಿರುವ ಈ ಹಸು ಪ್ರತಿನಿತ್ಯ ಮಂಗಗಳಿಗೆ ಹಾಲು ನೀಡಿ ಅವುಗಳ ಜೀವ ಉಳಿಸಿದೆ.
ಬೇಸಿಗೆ ಬಿಸಿಲ ಝಳಕ್ಕೆ ನೀರು, ಆಹಾರವಿಲ್ಲದೆ ಪ್ರಾಣಿಗಳು ಪರದಾಡುತ್ತಿವೆ. ಹೀಗೆ ಆಹಾರ, ನೀರಿಗಾಗಿ ಹಸಿವಿನಿಂದ ಬಳಲಿದ್ದ ದೇವಸ್ಥಾನದ ಸಮೀಪದಲ್ಲಿದ್ದ ಮಂಗಗಳಿಗೆ ಪ್ರತಿದಿನವೂ ಹಾಲು ನೀಡಿ ಅವುಗಳ ಹೊಟ್ಟೆ ತುಂಬಿಸುತ್ತಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಆ ಮೂಲಕ ಈ ವಿಶೇಷ ಹಸು ಜಿಲ್ಲೆಯಲ್ಲಿ ಭಾರೀ ಹೆಸರುವಾಸಿಯಾಗಿದೆ. ಹೀಗಾಗಿ ಇದನ್ನು ನೋಡಲು ಅಕ್ಕ-ಪಕ್ಕದ ಗ್ರಾಮದಿಂದ ಜನರು ದೇವಸ್ಥಾನದತ್ತ ಆಗಮಿಸುತ್ತಿದ್ದಾರೆ. ತಾಯಿಯ ಸ್ಥಾನದಲ್ಲಿ ನಿಂತು ಮಂಗಗಳಿಗೆ ಹಾಲು ನೀಡಿ ಪೋಷಿಸುತ್ತಿರುವ ಹಸುವನ್ನು ಕಂಡು ಖುಷಿಯ ಜತೆಗೆ ಅಚ್ಚರಿಪಡುತ್ತಿದ್ದಾರೆ.