ಮನುಷ್ಯನ ಮೇಲೆ ಕೋವಿಡ್ ಲಸಿಕೆ ಪ್ರಯೋಗ

ನವದೆಹಲಿ: ಭಾರತದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ದೇಶಿಯ ಕೋವಿಡ್‌–19 ಲಸಿಕೆ ಕೊವ್ಯಾಕ್ಸಿನ್‌ನ್ನು ಮನುಷ್ಯನ ಮೇಲೆ ಪ್ರಯೋಗ ನಡೆಸಲು ದೆಹಲಿಯ ಏಮ್ಸ್‌ ಅನುಮತಿ ನೀಡಿದ್ದು, ಸೋಮವಾರದಿಂದ ಮನುಷ್ಯನ ಮೇಲೆ ಕೊವ್ಯಾಕ್ಸಿನ್‌ ಕ್ಲಿನಿಕಲ್‌ ಟ್ರಯಲ್‌ ಪ್ರಕ್ರಿಯೆಗಳು ನಡೆಸಲಿವೆ.

ಕೋವಿಡ್‌–19 ಇರದ ಹಾಗೂ ಯಾವುದೇ ರೋಗಗಳಿಗೆ ಒಳಗಾಗಿರದ ಆರೋಗ್ಯವಂತರನ್ನು ಪ್ರಯೋಗಕ್ಕೆ ಆಯ್ಕೆ ಮಾಡಲಾಗಿದ್ದು, 18ರಿಂದ 55 ವರ್ಷ ವಯಸ್ಸಿನ ವ್ಯಕ್ತಿಗಳ ಮೇಲೆ ಕೊವ್ಯಾಕ್ಸಿನ್‌ ಕ್ಲಿನಿಕಲ್‌ ಟ್ರಯಲ್‌ ಅಧ್ಯಯನ ನಡೆಸಲಾಗುತ್ತದೆ ಎಂದು ಏಮ್ಸ್‌ ಕಮ್ಯುನಿಟಿ ಮೆಡಿಸಿನ್‌ ಕೇಂದ್ರದ ಪ್ರೊಫೆಸರ್‌ ಡಾ.ಸಂಜಯ್‌ ರಾಯ್‌ ತಿಳಿಸಿದ್ದಾರೆ.

ಐಸಿಎಂಆರ್ ಸಹಯೋಗದಿಂದ ಭಾರತ್ ಬಯೋಟೆಕ್ ಲಿಮಿಟೆಡ್ ಕೊವ್ಯಾಕ್ಸಿನ್‌ ಅಭಿವೃದ್ಧಿಪಡಿಸಿದ್ದು, ಮತ್ತೊಂದು ಲಸಿಕೆಯನ್ನು ‘ಝೈಡಸ್ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್‌’ ಅಭಿವೃದ್ಧಿಪಡಿಸಿದೆ.

ಲಸಿಕೆಯು ಮನುಷ್ಯನ ಮೇಲೆ ಮೊದಲ ಮತ್ತು ಎರಡನೇ ಹಂತದ ಪ್ರಯೋಗ ನಡೆಯಲಿದ್ದು, ಈ ಎರಡೂ ಲಸಿಕೆಗಳಿಗೆ ಭಾರತದ ಪ್ರಧಾನ ಔಷಧ ನಿಯಂತ್ರಕ ಇತ್ತೀಚೆಗಷ್ಟೇ ಅನುಮತಿ ನೀಡಿದೆ.

ಈ ಎರಡೂ ಲಸಿಕೆಗಳನ್ನು ಇಲಿಗಳು, ಮೊಲಗಳ ಮೇಲೆ ಆರಂಭಿಕ ಟ್ರಯಲ್‌ ನಡೆಸಲಾಗಿದೆ. ಆ ವರದಿಯನ್ನು ಆಧರಿಸಿ ಡಿಸಿಜಿಐ ಮನುಷ್ಯನ ಮೇಲೆ ಪ್ರಯೋಗಿಸಲು ಅನುಮತಿ ಸೂಚಿಸಿದೆ.