ಮಂಗಳೂರು: ನಗರದ ಸಾರಿಗೆ ವ್ಯವಸ್ಥೆಗೆ ಹೊಸ ಆಯಾಮ ನೀಡುವ ನಿರೀಕ್ಷೆ ಮೂಡಿಸಿರುವ ಪ್ರಸ್ತಾವಿತ ಮಂಗಳೂರು ವಾಟರ್ ಮೆಟ್ರೋ ಯೋಜನೆ ಮತ್ತಷ್ಟು ವೇಗ ಪಡೆದುಕೊಂಡಿದೆ. ಯೋಜನೆಯಡಿ ಪ್ರಸ್ತಾವಿಸಲಾಗಿದ್ದ 19 ನಿಲ್ದಾಣಗಳ ಪೈಕಿ 11 ನಿಲ್ದಾಣಗಳನ್ನು ಮಂಗಳೂರು ಬಂದರು ಮತ್ತು ಮೀನುಗಾರಿಕಾ ಉಪವಿಭಾಗ ಅಂತಿಮಗೊಳಿಸಿದೆ.
ನಗರ ಸಾರಿಗೆ ವ್ಯವಸ್ಥೆಯ ಜತೆಗೆ ಬಂದರು ಹಾಗೂ ಕರಾವಳಿ ಪ್ರದೇಶಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಉದ್ದೇಶವನ್ನು ವಾಟರ್ ಮೆಟ್ರೋ ಯೋಜನೆ ಹೊಂದಿದೆ. ಹಳೆ ಮಂಗಳೂರು ಬಂದರು, ಪೋರ್ಟ್ ಫೆರಿ, ಸ್ಯಾಂಡ್ಬಾರ್, ತೋಟ ಬೆಂಗ್ರೆ, ಹೊಯ್ಗೆ ಬಜಾರ್, ಜೆಪ್ಪು ಹಾಗೂ ಉಳ್ಳಾಲ ಸೇರಿದಂತೆ ವಿವಿಧ ಪ್ರದೇಶಗಳನ್ನು ಜಲಮಾರ್ಗದ ಮೂಲಕ ಸಂಪರ್ಕಿಸುವ ಪ್ರಸ್ತಾವನೆ ಇದೆ.
ಯೋಜನೆಯ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ಅಧ್ಯಯನ ನಡೆಸುವಂತೆ ಈ ಹಿಂದೆ ಸಚಿವ ಸಂಪುಟ ಸೂಚಿಸಿತ್ತು. 2025ರ ಜನವರಿ 9ರಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪಿಪಿಪಿ ಸೆಲ್ನೊಂದಿಗೆ ನಡೆದ ಚರ್ಚೆಯ ಬಳಿಕ, ಯೋಜನೆಗೆ ಅಗತ್ಯವಿರುವ ಭೂಮಿಯ ಅಂದಾಜು ವಿವರಗಳನ್ನು ಹೆಚ್ಚುವರಿ ಮಾಹಿತಿಯಾಗಿ ಸಲ್ಲಿಸಲಾಗಿದೆ. ಪ್ರತಿ ನಿಲ್ದಾಣಕ್ಕೆ ಬೇಕಾಗುವ ನಿಖರ ಭೂಮಿ ವಿವರಗಳನ್ನು ವಿವರವಾದ ಯೋಜನಾ ವರದಿ (ಡಿಪಿಆರ್)ಯಲ್ಲಿ ಸೇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತಾವಿತ 11 ನಿಲ್ದಾಣಗಳು
ಜೆಪ್ಪಿನಮೊಗರು ಎನ್ಎಚ್, ನಾರ್ದನ್ ಸ್ಯಾಂಡ್ಬಾರ್, ಓಲ್ಡ್ ಪೋರ್ಟ್, ಪೋರ್ಟ್ ಫೆರಿ, ಸ್ಯಾಂಡ್ಪಿಟ್ ಬೆಂಗ್ರೆ, ಬಂಗ್ರ ಕೂಳೂರು, ಕೂಳೂರು ಸೇತುವೆ, ಕಸಬಾ ಬೆಂಗ್ರೆ, ಸುಲ್ತಾನ್ ಬತ್ತೇರಿ, ಜೆಪ್ಪಿನಮೊಗರು ಓಲ್ಡ್ ಫೆರಿ ಹಾಗೂ ತಣ್ಣೀರುಬಾವಿ ಚರ್ಚ್ಗಳನ್ನು ನಿಲ್ದಾಣಗಳಾಗಿ ಗುರುತಿಸಲಾಗಿದೆ.
ಕೂಳೂರು ಸೇತುವೆ ಯೋಜನೆಯ ಪ್ರಮುಖ ಭಾಗವಾಗಿದ್ದು, ಇಲ್ಲಿ ರೋ-ರೋ ಹಾಗೂ ಫ್ಲೋಟಿಂಗ್ ಮಾದರಿಯನ್ನು ಆಧರಿಸಿ ಎರಡು ಪ್ರತ್ಯೇಕ ನಿಲ್ದಾಣಗಳನ್ನು ಪರಿಗಣಿಸಲಾಗುತ್ತಿದೆ.
ಮಂಗಳೂರಿನ ಭೌಗೋಳಿಕ ಸ್ವರೂಪ ಹಾಗೂ ಸುತ್ತಮುತ್ತಲಿನ ಜಲಮಾರ್ಗಗಳು ವಾಟರ್ ಮೆಟ್ರೋ ಪರಿಕಲ್ಪನೆಗೆ ಪೂರಕವಾಗಿವೆ.















