ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮೊಗಸಾಲೆ ಸಾಹಿತ್ಯ ವಿಚಾರ ಸರಣಿ ಕಾರ್ಯಕ್ರಮ

ಕಾರ್ಕಳ: ಬುದ್ಧಿ, ಭಾವ, ಅನುಭವದಿಂದ ಸಾಹಿತ್ಯ ಸೃಷ್ಟಿಯಾಗುತ್ತದೆ.ಜ್ಞಾನ ಎನ್ನುವುದು ಉತ್ಪಾದನೆ ಅಷ್ಟೇ ಹೊರತು ಹುಟ್ಟಿನಿಂದ ಬರುವ ಗುಣವಲ್ಲ.ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆ ಇದ್ದರೆ ಗೆಲುವು ಸಾಧ್ಯ. ಆದರೆ ಇಂದಿನ ದಿನಗಳಲ್ಲಿ ಇವು ಕಣ್ಮರೆಯಾಗುತ್ತಿವೆ ಎಂದು ಸಾಹಿತಿ ಮೊಗಸಾಲೆ ನಾರಾಯಣ ಭಟ್ ಹೇಳಿದರು.

ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಸಂಘ ಹಾಗೂ ಮೊಗಸಾಲೆ ೭೫ ಅಭಿನಂದನ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಮೊಗಸಾಲೆ ಸಾಹಿತ್ಯ ವಿಚಾರ ಸರಣಿ ಕಾರ್‍ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.

ಮನುಷ್ಯನಾದವನಿಗೆ ಜೀವನದಲ್ಲಿ ಜೀವನ ಪ್ರೀತಿ ಇರಬೇಕು ಆಗ ಮಾತ್ರ ಜೀವನ ಸುಗಮವಾಗುವುದು. ನಮ್ಮಲ್ಲಿ ರೂಪಕವಿದ್ದಲ್ಲಿ ಮಾತ್ರ ಸಾಹಿತ್ಯ ಅರಿಯಲು ಸಾಧ್ಯ ಜೊತೆಗೆ ಒಳನೋಟಗಳನ್ನು ಅರಿಯಲು ಸಾಧ್ಯ. ಸಾಹಿತ್ಯವನ್ನು ಸೃಷ್ಟಿ ಮಾಡುವುದು, ಓದುವುದು ಅದರಲ್ಲಿ ತಲ್ಲಣರಾಗುವುದು ಒಂದು ಸುಖದ ಸಂಕೇತ. ನಮ್ಮ ಮನಸ್ಥಿತಿಯನ್ನು ಯಾವುದೇ ಔಷಧಿ ಕಡಿಮೆ ಮಾಡಲಾಗದಿದ್ದರೂ ಒಂದು ಸಾಹಿತ್ಯ ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡುತ್ತದೆ. ಪದ್ಯಗಳ ಒಳಗೊಳ್ಳುವಿಕೆ ಅತ್ಯಂತ ಶ್ರೇಷ್ಟವಾದುದು ಜೊತೆಗೆ ಅದು ತನ್ಮಯತೆಯನ್ನು ನೀಡುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಶುಂಪಾಲ ಡಾ. ಮಂಜುನಾಥ್ ಎ ಕೋಟ್ಯಾನ್, ಸಾಹಿತ್ಯ ಕ್ಷೇತ್ರದಲ್ಲಿ ತನ್ನ ವಿಶಿಷ್ಟ ಬರವಣಿಗೆ ಮೂಲಕ ಹೆಸರು ಮಾಡಿದವರು ಮೊಗಸಾಲೆಯವರು. ಇವರ ಬರವಣಿಗೆ ಯು ಸಾಹಿತಿಗಳಿಗೆ ಮಾದರಿಯಾಗಿದೆ. ಸಾಹಿತ್ಯ ವಿದ್ಯಾರ್ಥಿಗಳು ಮೊಗಸಾಲೆಯಂತಹ, ಧೀಮಂತ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕೆಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಡಾ.ಪಾದೆಕಲ್ಲು ವಿಷ್ಣುಭಟ್ ಅವರು ಮೊಗಸಾಲೆಯವರ ಬಯಲು ಬೆಟ್ಟ ಕೃತಿಯನ್ನು ವಿಶೇಷವಾಗಿ ವಿಶ್ಲೇಷಿಸಿದರು.

ಅಷ್ಟವುದಾನಿ ಉಮೇಶ್ ಗೌತಮ್ ನಾಯಕ್ ಮೊಗಸಾಲೆಯವರ ಕವಿತೆಗಳನ್ನು ಹಾಡಿನ ಮೂಲಕ ಪ್ರಸ್ತುತ ಪಡಿಸಿದರು.

ಕಾರ್‍ಯಕ್ರಮದಲ್ಲಿ ಮೊಗಸಾಲೆ ೭೫ ಅಭಿನಂದನ ಸಮಿತಿಯ ಸದಸ್ಯರಾದ ಸದಾನಂದ ಪೂಜಾರಿ, ಕೇಶವ ಭಟ್, ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.ಸಾಹಿತಿ ಸದಾನಂದ ನಾರಾವಿ ಸ್ವಾಗತಿಸಿ, ವಿದ್ಯಾರ್ಥಿ ನವೀನ್ ಭಟ್ ನಿರೂಪಿಸಿ, ಕನ್ನಡ ವಿಭಾಗ ಉಪನ್ಯಾಸಕಿ ಸರಸ್ವತಿ ವಂದಿಸಿದರು.