ಆಯಶಸ್ ಟೆಸ್ಟ್‌ ಸರಣಿಗೆ ಇಂಗ್ಲೆಂಡ್‌ ತಂಡ ಸೇರಿದ ಮೋಯಿನ್​ ಅಲಿ: ನಿವೃತ್ತಿ ವಾಪಸ್

ಲಂಡನ್: 2021ರಲ್ಲಿ ನಿವೃತ್ತಿ ಘೋಷಿಸಿದ್ದ 35 ವರ್ಷದ ಮೋಯಿನ್​ ಅಲಿ ಅವರನ್ನು ಆಯಶಸ್​ ಸರಣಿಗೆ ಇಂಗ್ಲೆಂಡ್​ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇಂಗ್ಲೆಂಡ್​ – ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಕ್ರಿಕೆಟ್ ಸರಣಿ ಆಯಶಸ್​ನ ಮೊದಲೆರಡು ಪಂದ್ಯಗಳಿಗೆ ಮೋಯಿನ್​ ಅಲಿ ಅವರನ್ನು ಸೇರಿಸಿಕೊಳ್ಳಲಾಗಿದೆ.

35 ವರ್ಷ ವಯಸ್ಸಿನ ಅನುಭವಿ ಸ್ಪಿನ್ನರ್​ 2021ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಇಂಗ್ಲೆಂಡ್​ ತಂಡದಲ್ಲಿ ಆಟಗಾರರ ಗಾಯದ ಸಮಸ್ಯೆಯಿಂದಾಗಿ ಮತ್ತೆ ಅಲಿಗೆ ಮಣೆ ಹಾಕಲಾಗಿದೆ.

ಆಸ್ಟ್ರೇಲಿಯಾ- ಭಾರತ ತಂಡಗಳ ನಡುವೆ ಲಂಡನ್‌ನ ಓವಲ್​ ಮೈದಾನದಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ನಡೆಯುತ್ತಿದೆ. ಈ ಪಂದ್ಯ ಮುಗಿದ ನಂತರ ಐದು ದಿನಗಳಲ್ಲಿ ಆಯಶಸ್​ ಸರಣಿ ಆರಂಭವಾಗಲಿದೆ. ಈ ಸರಣಿಯ ಸೋಲು, ಗೆಲುವು ಇಂಗ್ಲಿಷರಿಗೆ ಮತ್ತು ಕಾಂಗರೂ ನಾಡಿನವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ, ಗಾಯಾಳುವಿನ ಬದಲಿಗೆ ಹೊಸಬರನ್ನು ಆಡಿಸದೇ ಅನುಭವಿಗೆ ಮತ್ತೆ ಕರೆ ನೀಡಲಾಗಿದೆ.
ಜೂನ್ 16 ರಿಂದ ಮೊದಲ ಎರಡು ಆಯಶಸ್ ಟೆಸ್ಟ್ ಪಂದ್ಯಗಳು ನಡೆಯಲಿವೆ. “ಸ್ಪಿನ್-ಬೌಲಿಂಗ್ ಆಲ್-ರೌಂಡರ್ ಮೋಯಿನ್ ಅಲಿ ಅವರನ್ನು ಜೂನ್‌ 16ರಂದು ಎಡ್ಜ್‌ಬಾಸ್ಟನ್‌ನಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಪಂದ್ಯಗಳಿಗಾಗಿ ಸೇರಿಸಲಾಗಿದೆ” ಎಂದು ಬುಧವಾರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಹೇಳಿಕೆಯಲ್ಲಿ ತಿಳಿಸಿದೆ.

ಅಲಿ ಎಡಗೈ ಸ್ಪಿನ್ ಬೌಲರ್ ಆಗಿರುವ ಜಾಕ್ ಲೀಚ್ ಸ್ಥಾನ ತುಂಬಲಿದ್ದಾರೆ. ಐಸಿಸಿ ನೀಡಿರುವ ಮಾಹಿತಿ ಪ್ರಕಾರ, ಜಾಕ್ ಲೀಚ್ ಶನಿವಾರ ಐರ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಬೆನ್ನು ನೋವಿಗೆ ತುತ್ತಾಗಿದ್ದರು. ಲಂಡನ್‌ನಲ್ಲಿ ಭಾನುವಾರ ಸ್ಕ್ಯಾನ್ ಮಾಡುವಾಗ ಬೆನ್ನು ಮೂಳೆ ಮುರಿತ ಪತ್ತೆಯಾಗಿದ್ದು, ಆಯಶಸ್ ಸರಣಿಯಿಂದ ಅವರನ್ನು ಹೊರಗಿಡಲಾಗಿದೆ.

2021 ರ ಬೇಸಿಗೆಯ ಕೊನೆಯಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ 35 ವರ್ಷದ ಅಲಿ, ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್, ಟೆಸ್ಟ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಮತ್ತು ಇಂಗ್ಲೆಂಡ್ ಪುರುಷರ ಕ್ರಿಕೆಟ್‌ನ ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ ಅವರೊಂದಿಗೆ ಚರ್ಚಿಸಿದ ನಂತರ ಮತ್ತೆ ತಂಡದಲ್ಲಿ ಅಡಲು ಒಪ್ಪಿಕೊಂಡಿದ್ದಾರೆ.

64 ಟೆಸ್ಟ್​ ಮ್ಯಾಚ್​ಗಳನ್ನು ಆಡಿರುವ ಮೋಯಿನ್​ ಅಲಿ 28.29 ರ ಸರಾಸರಿಯಲ್ಲಿ ಬ್ಯಾಟಿಂಗ್​ ಮಾಡಿದ್ದು, 2,914 ರನ್​ ಗಳಿಸಿದ್ದಾರೆ. ಟೆಸ್ಟ್​ನಲ್ಲಿ 5 ಶತಕ ಮತ್ತು 14 ಅರ್ಧಶತಕ ದಾಖಲಿಸಿದ್ದಾರೆ. ಬೆಸ್ಟ್​ ಸ್ಕೋರ್​ 155. ಬೌಲಿಂಗ್​​ನಲ್ಲಿ 64 ಟೆಸ್ಟ್ ಪೈಕಿ 112 ಇನ್ನಿಂಗ್ಸ್​ ಆಡಿದ್ದು, 195 ವಿಕೆಟ್​ ಕಿತ್ತಿದ್ದಾರೆ. ಅಲಿ ಇಂಗ್ಲೆಂಡ್​ ತಂಡಕ್ಕೆ ಮರಳಿರುವುದು ಬ್ಯಾಟಿಂಗ್​ಗೆ ಇನ್ನಷ್ಟು ಬಲ ಸಿಕ್ಕಂತಾಗಿದೆ.

ಇಂಗ್ಲೆಂಡ್ ಆಯಶಸ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಮೋಯಿನ್ ಅಲಿ, ಜೇಮ್ಸ್ ಆಂಡರ್ಸನ್, ಜೊನಾಥನ್ ಬೈರ್‌ಸ್ಟೋ, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲೆ, ಡಕೆಟ್, ಡ್ಯಾನ್ ಲಾರೆನ್ಸ್, ಆಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಆಲಿ ರಾಬಿನ್ಸನ್, ಜೋ ರೂಟ್, ಜೋಶ್ ಟಂಗ್, ಕ್ರಿಸ್ ವೋಕ್ಸ್.

ಇಂಗ್ಲೆಂಡ್ ಪುರುಷರ ಕ್ರಿಕೆಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ ರಾಬ್ ಕೀ, “ಟೆಸ್ಟ್ ಕ್ರಿಕೆಟ್‌ಗೆ ಮರಳುವ ಕುರಿತು ನಾವು ಈ ವಾರದ ಆರಂಭದಲ್ಲಿ ಮೋಯಿನ್ ಅಲಿ ಅವರನ್ನು ಸಂಪರ್ಕಿಸಿದ್ದೇವೆ. ಎರಡು ದಿನಗಳ ನಂತರ ಪ್ರತಿಕ್ರಿಯೆ ನೀಡಿ ತಂಡದಲ್ಲಿ ಆಡುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಮತ್ತೆ ಕ್ರಿಕೆಟ್ ಟೆಸ್ಟ್ ಆಡಲು ಅವರೂ ಉತ್ಸುಕರಾಗಿದ್ದಾರೆ. ಅವರ ಅಪಾರ ಅನುಭವ ಮತ್ತು ಆಲ್‌ರೌಂಡ್ ಸಾಮರ್ಥ್ಯ ಸರಣಿಗೆ ಹೆಚ್ಚು ಸಹಕಾರಿಯಾಗಲಿದೆ” ಎಂದು ತಿಳಿಸಿದ್ದಾರೆ.