ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳ ಆಟೋರಿಕ್ಷಾ ಸಂಚಾರದಲ್ಲಿ ಮಾರ್ಪಾಡು

ಉಡುಪಿ: ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳ ವ್ಯಾಪ್ತಿಯ ಪ್ರದೇಶಗಳು ಅಭಿವೃದ್ಧಿ ಹೊಂದಿ ಜನಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಹಾಗೂ ಜಿಲ್ಲೆಯಲ್ಲಿ ಹೊಸದಾಗಿ ಕಾಪು, ಬ್ರಹ್ಮಾವರ, ಹೆಬ್ರಿ ಮತ್ತು ಬೈಂದೂರು ತಾಲೂಕುಗಳು ರಚನೆಯಾಗಿರುವ ಹಿನ್ನೆಲೆ, ನಗರಗಳ ಜನಸಂಖ್ಯೆಗೆ ಅನುಗುಣವಾಗಿ ಆಟೋರಿಕ್ಷಾಗಳನ್ನು ಹೆಚ್ಚಿಸುವುದು, ರಿಕ್ಷಾ ನಿಲುಗಡೆಗೆ ಸ್ಥಳಾವಕಾಶದ ಕೊರತೆ, ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವುದು, ರಸ್ತೆ ಅಪಘಾತಗಳನ್ನು ತಡೆಯಲು, ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯವನ್ನು ನಿಯಂತ್ರಿಸುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಅತೀ ಅವಶ್ಯವೆಂದು ಪರಿಗಣಿಸಿ, 2012 ಏಪ್ರಿಲ್ 21 ರ ಅಧಿಸೂಚನೆಯಲ್ಲಿ ಹೊರಡಿಸಿರುವ ಆದೇಶವನ್ನು ಮಾರ್ಪಾಡು ಮಾಡಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಈ ಕೆಳಗಿನಂತೆ ಆದೇಶ ಹೊರಡಿಸಿರುತ್ತಾರೆ.

2012 ಫೆಬ್ರವರಿ 1 ರಿಂದ 2022 ಜೂನ್ 30 ರ ವರೆಗೆ ಪ್ರಸ್ತುತ ಉಡುಪಿ ತಾಲೂಕಿನ ವಿಳಾಸ ಹೊಂದಿದ್ದು, ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಇವರಿಂದ ಪರವಾನಿಗೆ ಪಡೆದು ಸಂಚರಿಸುತ್ತಿರುವ ಎಲ್ಲಾ ಆಟೋರಿಕ್ಷಾಗಳು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಈ ಹಿಂದಿನ ಅಧಿಸೂಚನೆಯಲ್ಲಿ ನಿರ್ಬಂಧಿಸಿದ ಸ್ಥಳಗಳನ್ನು ಸಡಿಲಿಸಿ, ನಗರಸಭಾ ವ್ಯಾಪ್ತಿಯಲ್ಲಿ ಸಂಚರಿಸಬಹುದಾಗಿದೆ. ಜಿಲ್ಲೆಯ ಸಾರಿಗೆ ಪ್ರಾಧಿಕಾರದಿಂದ ಪ್ರಸ್ತುತ ಸಾಲಿನ ಜುಲೈ 1 ರ ನಂತರ ಪರವಾನಿಗೆ ಪಡೆದ ಆಟೋರಿಕ್ಷಾಗಳು ಅಥವಾ ಇತರೆಡೆಯಿಂದ ವರ್ಗಾವಣೆ ಹೊಂದಿ ಬರುವ ಆಟೋರಿಕ್ಷಾಗಳು ಉಡುಪಿ ನಗರಸಬಾ ವ್ಯಾಪ್ತಿಯನ್ನು ಪ್ರವೇಶಿಸುವುದು ಹಾಗೂ ಸಂಚರಿಸುವುದನ್ನು ನಿಷೇಧಿಸಲಾಗಿದೆ.

2022 ಸೆಪ್ಟಂಬರ್ 30 ರ ವರೆಗೆ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲಿ ಪರವಾನಿಗೆ ಪಡೆದು ಸಂಚರಿಸುತ್ತಿರುವ ಎಲ್ಲಾ ಆಟೋ ರಿಕ್ಷಾಗಳು ಈ ಹಿಂದಿನಂತೆಯೇ ಪರವಾನಿಗೆಯಲ್ಲಿ ನಮೂದಿಸಿದ ಪ್ರದೇಶದಲ್ಲಿ ಅವಿಭಾಜಿತ ತಾಲೂಕಿನಾದ್ಯಂತ ಸಂಚರಿಸಬಹುದಾಗಿದೆ.

2022 ಅಕ್ಟೋಬರ್ 1 ರ ನಂತರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಇವರಿಂದ ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲಿ ಪರವಾನಿಗೆ ಪಡೆದು ಸಂಚರಿಸುತ್ತಿರುವ ಎಲ್ಲಾ ಆಟೋ ರಿಕ್ಷಾಗಳು ನಿರ್ಬಂಧಿತ ಪ್ರದೇಶಗಳನ್ನು ಹೊರತುಪಡಿಸಿ, ಆಯಾ ತಾಲೂಕಿನಾದ್ಯಂತ ಮಾತ್ರ ಸಂಚರಿಸಬೇಕು ಹಾಗೂ ಕಾಪು, ಬ್ರಹ್ಮಾವರ, ಹೆಬ್ರಿ ಮತ್ತು ಬೈಂದೂರು ತಾಲೂಕು ಪರವಾನಿಗೆ ಪಡೆದು ಸಂಚರಿಸುತ್ತಿರುವ ಎಲ್ಲಾ ಆಟೋ ರಿಕ್ಷಾಗಳು ಆಯಾ ತಾಲೂಕಿನಾದ್ಯಂತ ಮಾತ್ರ ಸಂಚರಿಸುಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.