ಮೋದಿ ಎಂದು ಕೂಗೋಣ: ವೈರಲ್ ಸಂದೇಶಕ್ಕೆ ಸಿಡಿದೆದ್ದ ಖಾಕಿ!

ಕುಂದಾಪುರ: ಸಿಎಂ ಕುಮಾರಸ್ವಾಮಿ ಮೀನುಗಾರರ ಸಮಾವೇಶಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಮೋದಿ, ಮೋದಿ ಎಂದು ಘೋಷಣೆಗಳನ್ನು ಕೂಗೋಣ ಎಂದು ಬಿಜೆಪಿ ಕಾರ್ಯಕರ್ತರು ಎನ್ನಲಾಗಿರುವ ಯುವಕರು ವಾಟ್ಸ್ಯಾಪ್‍ನಲ್ಲಿ ಸಂದೇಶ ಹರಿಯಬಿಟ್ಟಿದ್ದಾರೆ.
ವೈರಲ್ ಸಂದೇಶವನ್ನರಿತ ಕುಂದಾಪುರ ಡಿವೈಎಸ್‍ಪಿ ನೇತೃತ್ವದ ಪೊಲೀಸರ ತಂಡ ಸಂದೇಶ ಫಾರ್ವಡ್ ಮಾಡಿ ಅಹಿತಕರ ಘಟನೆಗಳಿಗೆ ಹೊಂಚು ಹಾಕುತ್ತಿರುವ ಒಂದಷ್ಟು ಮಂದಿ ಯುವಕರನ್ನು ಠಾಣೆಗೆ ಕರೆತಂದಿದ್ದಾರೆ.
ಬಿಗು ಬಂದೋಬಸ್ತ್:
ಸಿಎಂ ಕಾರ್ಯಕ್ರಮದಲ್ಲಿ ಯಾವುದೇ ಅಹಿಕರ ಘಟನೆಗಳು ನಡೆಯದಂತೆ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ನಾಲ್ಕು ಮುಖದ್ವಾರಗಳನ್ನು ಮಾಡಿ ಪ್ರತೀ ಮುಖದ್ವಾರದಲ್ಲೂ ತಪಾಸಣೆ ನಡೆಸಲಾಯಿತು. ಅಲ್ಲದೇ ಪುರುಷರ ಪಾಕೆಟ್, ಕರವಸ್ತ್ರಗಳನ್ನು ತಪಾಸಣೆಗೊಳಪಡಿಸಿದ ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಾಯಿತು. ಏನೂ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಒದಗಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಯವರ ನೇತೃತ್ವದ ಪೊಲೀಸರ ತಂಡಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಅಹಿತರ ಘಟನೆಗಳನ್ನು ನಡೆಸಲು ಹೊಂಚು ಹಾಕುತ್ತಿರುವ ಮಂದಿಯನ್ನು ಠಾಣೆಗೆ ಕರೆತಂದಿದ್ದೇವೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಅವರನ್ನು ಬಿಡುಗಡೆಗೊಳಿಸುತ್ತೇವೆ ಕುಂದಾಪುರ ಡಿವೈಎಸ್ಪಿ ಬಿ.ಪಿ ದಿನೇಶ್ ಕುಮಾರ್ ಎಂದು ತಿಳಿಸಿದರು.