ಭೂಮಿ ಹೊಂದಿರುವ ರೈತ ಮಹಿಳೆಯರಿಗೆ ಕಿಸಾನ್ ಸಮ್ಮಾನ್ ನಿಧಿ ದುಪ್ಪಟ್ಟು? ಮಧ್ಯಂತರ ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ?

ನವದೆಹಲಿ: ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಆರನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದು ಸಾಮಾನ್ಯ ಬಜೆಟ್ ಆಗಿರದೆ ಮಧ್ಯಂತರ ಬಜೆಟ್ ಆಗಲಿದೆ. ಚುನಾವಣಾ ವರ್ಷದ ಬಜೆಟ್ ಆಗಿರುವುದರಿಂದ ಎಲ್ಲರ ಕಣ್ಣು ಅದರತ್ತ ನೆಟ್ಟಿದೆ. ಪ್ರತಿ ಬಾರಿಯಂತೆ, ದೇಶದ ಸಂಬಳ ಪಡೆಯುವ ಮತ್ತು ಮಧ್ಯಮ ವರ್ಗವು ಬಜೆಟ್‌ನಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ.

ಬಜೆಟ್‌ಗೂ ಮುನ್ನ ಮೋದಿ ಸರ್ಕಾರವು ಭೂಮಿ ಹೊಂದಿರುವ ರೈತ ಮಹಿಳೆಯರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ದ್ವಿಗುಣಗೊಳಿಸಬಹುದು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಹೇಳಿದೆ.

ಪ್ರಸ್ತುತ, ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ದೇಶದ ಸುಮಾರು 11 ಕೋಟಿ ರೈತರಿಗೆ ವಾರ್ಷಿಕ 6000 ರೂ. ಸಹಾಯಧನ ನೀಡಲಾಗುತ್ತಿದೆ. ಇದರಲ್ಲಿ ಪುರುಷ ಮತ್ತು ಮಹಿಳಾ ಫಲಾನುಭವಿಗಳು ಇದ್ದಾರೆ.

ಫೆಬ್ರವರಿ 1 ರಂದು ಮಂಡಿಸಲಿರುವ ಮಧ್ಯಂತರ ಬಜೆಟ್‌ನಲ್ಲಿ ಮಹಿಳಾ ರೈತರಿಗೆ ಸಮ್ಮಾನ್ ನಿಧಿಯನ್ನು 12,000 ರೂ.ಗೆ ಹೆಚ್ಚಿಸುವ ಬಗ್ಗೆ ಪರಿಗಣಿಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಹೇಳಿಕೊಂಡಿದೆ.

ಇದಲ್ಲದೇ ಆರ್ಥಿಕವಾಗಿ ವಂಚಿತ ಮಹಿಳೆಯರಿಗಾಗಿ ನಗದು ವರ್ಗಾವಣೆ ಯೋಜನೆ ಆರಂಭಿಸುವ ಯೋಜನೆಯೂ ಇದೆ. ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನ ಪಡೆಯದ 21 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗಾಗಿ ನಗದು ವರ್ಗಾವಣೆ ಯೋಜನೆಯನ್ನು ಪ್ರಾರಂಭಿಸಲು ಸರ್ಕಾರ ಯೋಜಿಸುತ್ತಿದೆ ಎಂದು ವರದಿ ಹೇಳಿದೆ.

ಮಹಿಳಾ ರೈತರಿಗೆ ಸಮ್ಮಾನ್ ನಿಧಿಯನ್ನು 6,000 ರೂ.ಗಳಿಂದ 12,000 ರೂ.ಗಳಿಗೆ ಹೆಚ್ಚಿಸುವುದರಿಂದ ಸರಕಾರದ ಬೊಕ್ಕಸಕ್ಕೆ 120 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಬೀಳಲಿದೆ. ಕಿಸಾನ್ ಸಮ್ಮಾನ್ ನಿಧಿಯಡಿ ದೇಶಾದ್ಯಂತ ಸುಮಾರು 11 ಕೋಟಿ ರೈತರ ಖಾತೆಗಳಿಗೆ 2.8 ಲಕ್ಷ ಕೋಟಿ ರೂ.ಗೂ ಹೆಚ್ಚು ಮೊತ್ತ ಬಂದಿದೆ. ದೇಶದಲ್ಲಿ ಸುಮಾರು 26 ಕೋಟಿ ರೈತರಿದ್ದಾರೆ. ಜಮೀನು ಹೊಂದಿರುವ ರೈತ ಮಹಿಳೆಯರಲ್ಲಿ ಶೇ.13ರಷ್ಟು ಮಹಿಳೆಯರಿದ್ದಾರೆ ಎಂದು ಅಂಕಿ ಅಂಶಗಳು ಹೇಳಿವೆ.

MNREGA ಅಡಿಯಲ್ಲಿಯೂ ಮಹಿಳಾ ಕಾರ್ಮಿಕರಿಗೆ ಆದ್ಯತೆ ನೀಡಲಾಗುವುದು ಎನ್ನಲಾಗಿದೆ. ಫೆಬ್ರವರಿ 1 ರಂದು ಬಜೆಟ್ ಭಾಷಣದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳನ್ನು ಘೋಷಿಸಬಹುದು. ಈ ಬಗ್ಗೆ ಯಾವುದೇ ಮಾಹಿತಿ ನೀಡಲು ಕೃಷಿ ಸಚಿವಾಲಯ ನಿರಾಕರಿಸಿದೆ.