ಬೈಂದೂರು: ಕರ್ನಾಟಕ ನೀರಾವರಿ ನಿಗಮದ ವರಾಹಿ ಯೋಜನೆಯಲ್ಲಿ ಅತ್ಯಂತ ಕಳಪೆ ಕಾಮಗಾರಿಯಿಂದ ಹಾಗೂ ಅಗೆದ ರಸ್ತೆಗಳನ್ನು ಮುಚ್ಚದೆ ಇರುವುದರಿಂದ ರಸ್ತೆಯಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿದೆ. ಈಗಾಗಲೇ ಶಿರೂರು ಮೂರ್ಕೈಯ ಜಿ. ಮಧು ಹಾಗೂ ಗುಲ್ವಾಡಿಯ ಹರೀಶ್ ಪೂಜಾರಿ ಎಂಬ ಇಬ್ಬರು ವ್ಯಕ್ತಿಗಳು ಅಪಘಾತಕ್ಕೊಳಗಾಗಿ ಮಣಿಪಾಲದ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದು, ಇವರ ಚಿಕಿತ್ಸೆಯ ವೆಚ್ಚವನ್ನು ಸಂಬಂಧಪಟ್ಟ ಗುತ್ತಿಗೆದಾರರು ಭರಿಸುವಂತೆ ಕೋರಿ ರಾಜ್ಯ ಮೋದಿ ಬ್ರಿಗೇಡ್ ವತಿಯಿಂದ ಬೈಂದೂರು ಕ್ಷೇತ್ರದ ಸಿದ್ದಾಪುರದ ವಾರಾಹಿ ಯೋಜನೆಯ ಕಾರ್ಯಪಾಲಕ ಅಭಿಯಂತರದಾಸೇಗೌಡರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮೋದಿ ಬ್ರಿಗೇಡ್ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್ ಶೆಟ್ಟಿ, ಗುಲ್ವಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಂದ್ರ ಶೆಟ್ಟಿ, ಕುಂದಾಪುರ ಜಿಲ್ಲಾ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಂಬಾರು ದಿನಕರ್ ಶೆಟ್ಟಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಶೇಕರ್ ಪೂಜಾರಿ, ಅಮರನಾಥ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.



















