ಮೋದಿ ನೇತೃತ್ವದ ‘ಒಂದೇ ದೇಶ, ಒಂದೇ ಚುನಾವಣೆ’ ಸಭೆಗೆ 5 ಪಕ್ಷಗಳ ನಾಯಕರು ಗೈರು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ‘ಒಂದೇ ದೇಶ, ಒಂದೇ ಚುನಾವಣೆ’ ಹಾಗೂ ‘ನೀತಿ ಆಯೋಗದ’ ಕುರಿತ ಸರ್ವ ಪಕ್ಷಗಳ ಸಭೆಗೆ ಕಾಂಗ್ರೆಸ್, ಮಮತಾ ಬ್ಯಾನರ್ಜಿ, ಮಾಯಾವತಿ ಹಾಗೂ ಇತರ 5 ಪಕ್ಷಗಳ ನಾಯಕರು ಗೈರಾಗಿದ್ದಾರೆ.

‘ಒಂದೇ ದೇಶ, ಒಂದೇ ಚುನಾವಣೆ’ ಹಾಗೂ ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿ ಕುರಿತು ನಡೆಯುತ್ತಿರುವ ‘ನೀತಿ ಆಯೋಗ’ದ ಸಭೆಗಳಿಗೆ ವಿರೋಧ ಪಕ್ಷದ ನಾಯಕರು ಸೇರಿದಂತೆ ವಿವಿಧ ಐದು ಪಕ್ಷಗಳ ನಾಯಕರು ಗೈರಾಗುವ ಮೂಲಕ ನಿರ್ಲಕ್ಷ್ಯ ವಹಿಸಿದ್ದಾರೆ.ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದು, ಮಮತಾ ಬ್ಯಾನರ್ಜಿ ಚಲನಶೀಲತೆ ಇಲ್ಲದ ಪಕ್ಷ ಎಂದು ಟೀಕಿಸಿದ್ದಾರೆ. ಮಾಯಾವತಿ ಅವರು ಸರ್ಕಾರದ ಕುರಿತು ಅಪಹಾಸ್ಯ ಮಾಡಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ಅವರೂ ಸಹ ಸಭೆಗೆ ಹಾಜರಾಗಿಲ್ಲ. ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ತಮ್ಮ ಪಕ್ಷದ ಮುಖಂಡರನ್ನು ಕಳುಹಿಸಿದ್ದಾರೆ.

ಇಂದು ಸಭೆಯ ಕುರಿತಾಗಿ ನಡೆದ 10 ಪ್ರಮುಖ ಬೆಳವಣಿಗೆಗಳು

1. ಹಣ ಹಾಗೂ ಸಮಯವನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ‘ಒಂದೇ ದೇಶ ಒಂದೇ ಚುನಾವಣೆ’ ಕುರಿತು ಸರ್ವ ಪಕ್ಷಗಳ ಅಭಿಪ್ರಾಯಗಳನ್ನು ತಿಳಿಸಲು ಸಭೆ ಕರೆಯಲಾಗಿತ್ತು. ಆದರೆ, ವಿರೋಧ ಪಕ್ಷಗಳು ಗೈರಾಗುವ ಮೂಲಕ ನಿರಾಸಕ್ತಿ ವಹಿಸಿದ್ದು, ಈ ನಿರ್ಧಾರ ಫೆಡರಲ್ ತತ್ವಗಳಿಗೆ ವಿರುದ್ಧವಾಗಿವೆ ಎಂದು ತಿಳಿಸಿವೆ.

2. ‘ಒಂದೇ ದೇಶ ಒಂದೇ ಚುನಾವಣೆ’ ಚಿಂತನೆ ಕುರಿತು ಸಂವಿಧಾನ ತಿದ್ದುಪಡಿಗೆ ರಾಜ್ಯಸಭೆ ಹಾಗೂ ಲೋಕಸಭೆ ಎರಡರಲ್ಲೂ ಸಹ ಮೂರನೇ ಎರಡಷ್ಟು ಬಹುಮತ ಸಾಬೀತು ಪಡಿಸಬೇಕು. ಹೀಗಾಗಿ ಸರ್ವ ಪಕ್ಷಗಳ ಮನವೊಲಿಸಲು ಬಿಜೆಪಿ ಈ ಸಭೆ ಕರೆದಿದೆ.

3. ಈ ಕುರಿತು ಬಿಎಸ್‍ಪಿಯ ಮಾಯಾವತಿ ಅವರು ಪ್ರತಿಕ್ರಿಯಿಸಿ, ಬ್ಯಾಲೆಟ್ ಪೇಪರ್ ಬಳಕೆಯನ್ನು ಬಿಟ್ಟು ವಿದ್ಯುನ್ಮಾನ ಮತ ಯಂತ್ರಗಳನ್ನೇ ಬಳಸುತ್ತಿರುವುದು ಮೊಂಡುತನವಾಗಿದ್ದು, ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಹಾಕುವ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ.

4. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮಂಗಳವಾರ ಪತ್ರ ಬರೆದು, ‘ಒಂದೇ ದೇಶ ಒಂದೇ ಚುನಾವಣೆ’ ಕುರಿತು ಪ್ರತಿಕ್ರಿಯಿಸಲು ಒಂದೇ ಸಭೆ ಸಾಕಾಗುವುದಿಲ್ಲ ಎಂದು ವಾದಿಸಿ, ಈ ಕುರಿತು ಸರ್ಕಾರ ಶ್ವೇತಪತ್ರ ಪತ್ರ ಹೊರಡಿಸಿ, ತಜ್ಞರನ್ನು ಸಂಪರ್ಕಿಸಿ, ಪ್ರತಿಕ್ರಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

5. ಮಮತಾ ಬ್ಯಾನರ್ಜಿ ನೀತಿ ಆಯೋಗದ ಸಭೆಗೂ ತಗಾದೆ ಎತ್ತಿದ್ದು, ನೀತಿ ಆಯೋಗದ ಪ್ರಸ್ತಾವನೆ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಭಿವೃದ್ಧಿಯಂತಹ ಯೋಜನೆಗಳನ್ನು ತೃಣಮೂಲ ಕಾಂಗ್ರೆಸ್ ವಿರೋಧಿಸುತ್ತದೆ. ಇದು ರಾಜ್ಯದ ಎಲ್ಲ ಜಿಲ್ಲೆಗಳ ಸಮತೋಲನ ಹಾಗೂ ಏಕರೂಪತೆಯ ಅಭಿವೃದ್ಧಿ ಸಾಧಿಸುವ ಉದ್ದೇಶಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

6. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ನಿಯೋಜಿತ ಪ್ರತಿನಿಧಿಗಳನ್ನಾಗಿ ಎಎಪಿಯಿಂದ ರಾಘವ್ ಚಂಧ, ಟಿಡಿಪಿಯಿಂದ ಜಯದೇವ್ ಗಲ್ಲ ಅವರನ್ನು ಕಳುಹಿಸಿದ್ದಾರೆ.

7. ಸಭೆಯಿಂದ ರಾಜ್ಯಕ್ಕೆ ಏನೂ ಸಹಾಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ತಮ್ಮ ಮಗ ಹಾಗೂ ಪಕ್ಷದ ಮುಖ್ಯಸ್ಥ ಕೆ.ಟಿ.ರಾಮ ರಾವ್ ಅವರನ್ನು ಕಳುಹಿಸಿದ್ದಾರೆ.

8. ಚರ್ಚೆ ಮಾಡಲು ಏನಿದೆ? ನಾವು ಕೇಂದ್ರ ಸರ್ಕಾರದೊಂದಿಗೆ ಸಾಂವಿಧಾನಿಕ ಸಂಪರ್ಕವನ್ನು ಮಾತ್ರ ಹೊಂದಿದ್ದೇವೆ. ಈಗಲೂ ನಾನು ಫೆಡರಲ್ ಫ್ರಂಟ್‍ನ್ನು ಬೆಂಬಲಿಸುತ್ತೇನೆ. ಕೇಂದ್ರದೊಂದಿಗೆ ಮಾತನಾಡಿ ಏನೂ ಪ್ರಯೋಜನವಿಲ್ಲ. ಈವರೆಗೆ ಕೇಂದ್ರದಿಂದ ಒಂದು ರೂಪಾಯಿನೂ ಪಡೆದಿಲ್ಲ. ಮೋದಿ ಅವರು ಫ್ಯಾಸಿಸ್ಟ್ ಸರ್ಕಾರ ನಡೆಸುತ್ತಿದ್ದಾರೆ ಎಂದು ಈಗಾಗಲೇ ಹೇಳಿದ್ದೇನೆ ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.

9. ಏಕಕಾಲಿಕ ಚುನಾವಣೆ ಮಾತ್ರವಲ್ಲದೆ, ಸಭೆಯಲ್ಲಿ ನೀತಿ ಆಯೋಗದ ಪ್ರಸ್ತಾವನೆ ಕುರಿತೂ ಸಹ ಚರ್ಚಿಸಿಲಾಗುತ್ತಿದೆ. ಮಹತ್ವಾಕಾಂಕ್ಷಿಯ ಜಿಲ್ಲೆಗಳು ಎಂಬ ಯೋಜನೆ ಕುರಿತು ಚರ್ಚೆ ನಡೆಯಲಿದ್ದು, 28 ರಾಜ್ಯಗಳ 117 ಜಿಲ್ಲೆಗಳ ಸಾಮಾಜಿಕ-ಆರ್ಥಿಕ ಚಟುವಟಿಕೆಗಳು ಚುರುಕು ಪಡೆಯಲಿವೆ.

10. ಸಭೆಯಲ್ಲಿ ಈ ವರ್ಷ ಆಚರಿಸಲಾಗುವ ಮಹತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಹಾಗೂ 2022ಕ್ಕೆ ಆಚರಿಸಲಾಗುತ್ತಿರುವ ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷಾಚರಣೆಯ ಕುರಿತು ಚರ್ಚಿಸಲಾಗುತ್ತಿದೆ.