ಮೊಬೈಲ್ ಟವರ್ ಕೆಳಗಡೆ ತರಕಾರಿ‌ ಗಿಡ ನೆಟ್ಟು ಪ್ರತಿಭಟನೆ, 8 ತಿಂಗಳಿಂದ‌ ನೆಟ್ವರ್ಕ್ ವ್ಯತ್ಯಯ

ಮಂಗಳೂರು: ಮೊಬೈಲ್ ನೆಟ್ವರ್ಕ್ ವ್ಯತ್ಯಯ ಆಗುತ್ತಿರುವುದರಿಂದ ಬೇಸತ್ತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಗ್ರಾಮದ ಗ್ರಾಮಸ್ಥರು ಮೊಬೈಲ್ ಟವರ್ ಬಳಿ ತರಕಾರಿ ಗಿಡಗಳನ್ನು ನೆಡುವ ಮೂಲಕ ವಿನೂತನ ಶೈಲಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದಾರೆ.
ಹರಿಹರ ಪಳ್ಳತ್ತಡ್ಕ ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಬಿಎಸ್‍ಎನ್‍ಎಲ್ ಮೊಬೈಲ್ ಟವರ್ ಕಳೆದ ಎಂಟು ತಿಂಗಳಿಂದ ಸರಿಯಾಗಿ ಕಾರ್ಯಾಚರಿಸುತ್ತಿರಲಿಲ್ಲ. ಇದರಿಂದ ಹರಿಹರ, ಬಾಳುಗೋಡು, ಐನಕಿದು, ಕಲ್ಲೇಮಠ, ಕಲ್ಲೇರಿಕಟ್ಟ, ಮಿತ್ತಮಜಲು, ಕಿರಿಭಾಗ ಮೊದಲಾದ ಭಾಗದ ಜನತೆ ತೊಂದರೆ ಅನುಭವಿಸುತ್ತಿದ್ದರು.
ಟವರು ಸಿಗ್ನಲ್ ಸಮಸ್ಯೆ ಸರಿಪಡಿಸುವಂತೆ ಗ್ರಾಮಸ್ಥರು ಅನೇಕ ಭಾರಿ ಅಧಿಕಾರಿಗಳ, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಸರಿ ಹೋಗಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಉಪಯೋಗಕ್ಕೆ ಬಾರದ ಮೊಬೈಲ್ ಟವರ್ ಅಡಿಯಲ್ಲಿ ತರಕಾರಿ ಗಿಡಗಳನ್ನು ನೆಟ್ಟು ಪ್ರತಿಭಟಿಸಿದ್ದಾರೆ. ಈ ಭಾಗದಲ್ಲಿ ಬಿಎಸ್‍ಎನ್‍ಎಲ್ ಮೊಬೈಲ್ ಹೊರತು ಪಡಿಸಿ ಇನ್ಯಾವುದೇ ಖಾಸಗಿ ಮೊಬೈಲ್ ಸೇವೆಗಳಿಲ್ಲ. ಇತ್ತೀಚಿನ ದಿನಗಳಲ್ಲಿ ಇಲ್ಲಿರುವ ಮೊಬೈಲ್ ಸಿಗ್ನಲ್ ದಿನದ ಬಹುತೇಕ ಹೊತ್ತು ಕಣ್ಮರೆಯಾಗುತ್ತಿದೆ. ಮೊದಲೆಲ್ಲ ಕರೆಂಟ್ ಇದ್ದಾಗ ಇರುತಿದ್ದ ಸಿಗ್ನಲ್ ಪ್ರಸ್ತುತ ಕರೆಂಟ್ ಇದ್ದರೂ ಸ್ಥಗಿತಗೊಳ್ಳುತ್ತಿದೆ. ಇದರಿಂದ ಬೇಸತ್ತು ಗ್ರಾಮಸ್ಥರು ಅಧಿಕಾರಿಗಳ, ಜನಪ್ರತಿನಿಧಿಗಳ ಗಮನ ಸೆಳೆಯಲು ಶಾಂತಿಯುತವಾಗಿ ಸಾಂಕೇತಿಕ ರೀತಿಯಲ್ಲಿ ಈ ರೀತಿ ಪ್ರತಿಭಟನೆ ನಡೆಸಿದ್ದಾರೆ.
ಕಳೆದ 8 ತಿಂಗಳಿಂದ ಸರಿಯಾಗಿ‌ ಮೊಬೈಲ್ ನೆಟ್ವರ್ಕ್ ಸಿಗುತ್ತಿಲ್ಲ. ಸಮಸ್ಯೆ ಬಗ್ಗೆ ಈಗಾಗಲೇ ಹಲವು ಬಾರಿ‌ ಸಂಬಂಧಿತರಿಗೆ ಮಾಹಿತಿ ನೀಡಲಾಗಿದೆ. ಆದರೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಪ್ರತಿಭಟನೆ ಗೆ ಮುಂದಾಗಿದ್ದೇವೆ ಎಂದು‌ ಗ್ರಾಮಸ್ಥರು ತಿಳಿಸಿದ್ದಾರೆ.